ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--021

ಹೊಳೆನರಸೀಪುರ, ನ.6-ರಾಜ್ಯದಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲ್ಲೂಕಿನ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾಳೆಯಿಂದ ಕರ್ನಾಟಕ ವಿಕಾಸ ಯಾತ್ರೆ ನಡೆಸುತ್ತಿದ್ದು , ಇದು ನನ್ನ ಬದುಕಿನ 2ನೇ ಹೋರಾಟವಾಗಿದೆ ಎಂದರು. ಈ ಬಾರಿ ರಾಷ್ಟ್ರೀಯ ಪಕ್ಷಗಳ ಧೋರಣೆಯಿಂದ ಬೇಸತ್ತಿರುವ ರಾಜ್ಯದ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಶಕ್ತಿ ಏನೆಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಸವಾಲು ಹಾಕಿದರು.

ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಅಸೆ ಎಲ್ಲರಿಗೂ ಇರುತ್ತದೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೂ ಆಸೆ ಇದೆ. ಅವರು ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ಕೋರ್ ಕಮಿಟಿ ತೀರ್ಮಾನಿಸಲಿದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು. ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿರುವ ಕುರಿತಂತೆ ಭವಾನಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್‍ಡಿಕೆ, ಗೌಡರು ಅನುಮತಿ ನೀಡಿದ್ದರೆ ಅವರನ್ನೇ ಕೇಳಿ ಎಂದು ಹಾರಿಕೆ ಉತ್ತರ ನೀಡಿದರು.
ಒಟ್ಟಾರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರ್ಯಾರು ಕಣಕ್ಕಿಳಿಯಬೇಕು, ಯಾರು ಪಕ್ಷಕ್ಕಾಗಿ ತ್ಯಾಗ ಮಾಡಬೇಕು ಎಂಬ ಗೊಂದಲಗಳಿಗೆ ಶೀಘ್ರ ತೆರೆ ಎಳೆಯುತ್ತೇನೆ ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.

Facebook Comments

Sri Raghav

Admin