ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಸಂಚಲನ, ಕರುಣಾನಿಧಿ ಜೊತೆ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi--Tamilnadu--01

ಚೆನ್ನೈ,ನ.6- ಮಾಧ್ಯಮದ ಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಒಂದು ಅಪರಾಧ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರಮೋದಿ, ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಪ್ರಬಲ ಅಂಗವಾಗಿರುವ ಮಾಧ್ಯಮವು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ಮಾಡಿದ್ದಾರೆ.  ಸಂಪಾದಕೀಯ ಸ್ವಾತಂತ್ರ್ಯವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಸದ್ಬಳಕೆ ಮಾಡಿಕೊಳ್ಳುವಂತೆಯೂ ಅವರು ಪತ್ರಿಕಾ ಮಾಧ್ಯಮಕ್ಕೆ ಕಿವಿಮಾತು ಹೇಳಿದರು.
ಚೆನ್ನೈನಲ್ಲಿಂದು ದಿನ ತಂತಿ ಪತ್ರಿಕೆಯ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಸಾಧನೆಗಳನ್ನು ಶ್ಲಾಘಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಪತ್ರಿಕೆಯನ್ನು ಪ್ರಜಾಪ್ರಭುತ್ವದ 4ನೇ ಅಂಗ ಎಂದು ಬಣ್ಣಿಸಿದ್ದರು. ಮಾಧ್ಯಮವು ನಿಜಕ್ಕೂ ಅತ್ಯಂತ ಶಕ್ತಿಶಾಲಿ. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವುದು ಅಪರಾಧವಾಗುತ್ತದೆ ಎಂದು ಮೋದಿ ಎಚ್ಚರಿಕೆ ನೀಡಿದರು.

ಬರವಣಿಗೆಯ ಸ್ವಾತಂತ್ರ್ಯ ಯಾವುದೇ ವಿಷಯದ ಬಗ್ಗೆ ತಪ್ಪಾಗಿ ಬರೆಯುವ ಸ್ವಾತಂತ್ರವಿದೆ ಎಂದು ಅರ್ಥವಲ್ಲ. ಸಂಪಾದಕೀಯ ಮತ್ತು ಅಗ್ರ ಲೇಖನದ ಮೂಲಕ ಸಮಾಜವನ್ನೇ ತಿದ್ದಬಹುದು. ಸಂಪಾದಕೀಯ ಸ್ವಾತಂತ್ರ್ಯವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ನಡುವೆಯೇ ಪೈಪೋಟಿ ನಡೆಯುತ್ತಿದೆ. ಆದರೆ ಇದು ಆರೋಗ್ಯಕರವಾಗಿರಬೇಕು. ವರದಿ ಮಾಡುವಾಗ ನಿಖರತೆ ಮತ್ತು ವಿಶ್ವಾಸರ್ಹತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ಹೇಳಿದರು. ರಾಜಧಾನಿ ಚೆನ್ನೈ , ಕಾಂಚಿಪುರಂ, ತಿರುವಳ್ಳೂರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಜಲಪ್ರಳಯದ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜ್ಯಕ್ಕೆ ಅಗತ್ಯವಾದ ಎಲ್ಲ ನೆರವನ್ನು ನೀಡಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಆಶ್ವಾಸನೆ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಬನ್ವರಿ ಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನೀರ್ ಸೆಲ್ವಂ ಹಾಗೂ ಸಂಪುಟ ಸಚಿವರು, ಖ್ಯಾತ ಚಿತ್ರನಟ ರಜನಿಕಾಂತ್, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಸಂಚಲನ ಮೂಡಿಸಿದ ಮೋದಿ ಭೇಟಿ:

ವಿವಿಧ ಅಧಿಕೃತ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಪ್ರಧಾನಿ ಚೆನ್ನೈಗೆ ಆಗಮಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೇ ವೇಳೆ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಂ .ಕರುಣಾನಿಧಿ ಅವರನ್ನು ಮೋದಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಇದು ಎಐಎಡಿಎಂಕೆ ಸದಸ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚೆನ್ನೈನ ಗೋಪಾಲಪುರಂನಲ್ಲಿರುವ ಡಾ.ಎಂ.ಕೆ ಅವರ ನಿವಾಸಕ್ಕೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12.30ಕ್ಕೆ ಆಗಮಿಸಿ ಉಭಯ ಕುಶಲೋಪರಿ ವಿಚಾರಿಸಿದರು.

ಈ ಮಧ್ಯೆ ಪ್ರಧಾನಿ ಮತ್ತು ರಜನಿಕಾಂತ್ ಕೆಲಕಾಲ ಉಭಯ ಕುಶಲೋಪರಿ ಸಮಾಲೋಚನೆ ನಡೆಸಿದ್ದು ಕುತೂಹಲ ಕೆರಳಿಸಿದೆ. ತಲೈವ ರಜನಿಕಾಂತ್ ರಾಜಕೀಯ ರಂಗ ಪ್ರವೇಶಿಸಲಿದ್ದಾರೆ ಎಂದು ಅಭಿಮಾನಿಗಳು ತೀವ್ರ ಕುತೂಹಲಗೊಂಡಿರುವಾಗಲೇ ಇವರಿಬ್ಬರು ಚರ್ಚೆಯೂ ಸಂಚಲನ ಮೂಡಿಸಿದೆ.
ಇದೇ ಸಂದರ್ಭದಲ್ಲಿ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ 2ಜಿ ಹಗರಣದ ಮಹತ್ವದ ವಿಚಾರಣೆ ನಡೆಯಲಿದ್ದು, ಇದೂ ಕೂಡ ಪ್ರಧಾನಿ ಮೋದಿ-ಎಂ ಕರುಣಾನಿಧಿ ಭೇಟಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

2ಜಿ ಹಗರಣದಲ್ಲಿ ಕರುಣಾನಿಧಿ ಅವರ ಪುತ್ರಿ ಮತ್ತು ಸಂಸದೆ ಕನ್ನಿಮೋಳಿ, ಸಂಬಂಧಿ, ಕೇಂದ್ರದ ಮಾಜಿ ಸಚಿವ ಎ.ರಾಜ ಸೇರಿದಂತೆ ಕರುಣಾನಿಧಿ ಅವರ ಬಹುತೇಕ ಕುಟುಂಬ ಸದಸ್ಯರು ಭಾಗಿಯಾಗಿದ್ದು, ಈ ಬಗ್ಗೆ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ನಡೆಯುತ್ತಿದೆ.

Facebook Comments

Sri Raghav

Admin