ಪರಿವರ್ತನಾ ರ‍್ಯಾಲಿ ಯಶಸ್ವಿಗೊಳಿಸದಂತೆ ಅಶೋಕ್’ಗೆ ಕಾಂಗ್ರೆಸ್‍ ಸಚಿವರೊಬ್ಬರಿಂದ ಬ್ಲಾಕ್‍ಮೇಲ್..!

ಈ ಸುದ್ದಿಯನ್ನು ಶೇರ್ ಮಾಡಿ

Amit-n-01

ಬೆಂಗಳೂರು,ನ.6-ಬಹು ನಿರೀಕ್ಷಿತ ಬಿಜೆಪಿಯ ನವಕರ್ನಾಟಕ ಪರಿವರ್ತನಾ ರ್ಯಾಲಿ ಬೆಂಗಳೂರಿನಲ್ಲಿ ವಿಫಲವಾಗಲು ಉಸ್ತುವಾರಿ ವಹಿಸಿದ್ದ ಆರ್.ಅಶೋಕ್ ಅವರಿಗೆ ಕಾಂಗ್ರೆಸ್‍ನ ಹಿರಿಯ ಸಚಿವರೊಬ್ಬರು ಬ್ಲಾಕ್‍ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಆರ್.ಅಶೋಕ್ ನರ್ಮ್ ಯೋಜನೆಯಡಿ ಖರೀದಿ ಮಾಡಿದ್ದ ಬಸ್ ಹಾಗೂ ಬೆಂಗಳೂರು ಸುತ್ತಮುತ್ತ ತಮ್ಮ ಬೆಂಬಲಿಗರಿಗೆ ಬಗರ್ ಹುಕಂನಲ್ಲಿ ನೀಡಿದ ಜಮೀನಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನು ಅಸ್ತ್ರವಾಗಿಟ್ಟುಕೊಂಡ ಬೆಂಗಳೂರು ಮೂಲದ ಹಿರಿಯ ಸಚಿವರೊಬ್ಬರು ಪರಿವರ್ತನ ರ್ಯಾಲಿ ಯಶಸ್ವಿಗೊಳಿಸಿದರೆ ನಿಮ್ಮ ಮೇಲಿರುವ ಪ್ರಕರಣಗಳನ್ನು ಮರು ತನಿಖೆಗೆ ಆದೇಶ ಮಾಡಲಿದ್ದೇವೆ ಎಂದು ಬೆದರಿಸಿದ್ದಾರೆ. ಇದರಿಂದ ತುಸು ಗಲಿಬಿಲಿಗೊಂಡ ಅಶೋಕ್ ಚುನಾವಣಾ ಸಂದರ್ಭದಲ್ಲಿ ಸರ್ಕಾರ ತಮ್ಮ ಮೇಲೆ ಇದನ್ನೇ ಅಸ್ತ್ರವಾಗಿಟ್ಟುಕೊಂಡು ತನಿಖೆ ನಡೆಸಬಹುದು ಎಂಬ ಭೀತಿಯಿಂದಾಗಿ ಸ್ವತಃ ತಾವು ಪ್ರತಿನಿಧಿಸುವ ಪದ್ಮನಾಭನಗರದಿಂದಲೇ ಕಾರ್ಯಕರ್ತರನ್ನು ಕರೆತರಲಿಲ್ಲ ಎಂದು ತಿಳಿದುಬಂದಿದೆ.  ಯಾತ್ರೆ ಸಂಪೂರ್ಣವಾಗಿ ವಿಫಲಗೊಳ್ಳುವಂತೆ ನೋಡಿಕೊಳ್ಳಬೇಕು. ಯಶಸ್ವಿಯಾದರೆ ಅದರ ಲಾಭ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಲ್ಲುತ್ತದೆ. ಯಾತ್ರೆಯಿಂದ ವಿಮುಖರಾಗಬೇಕೆಂದು ಈ ಸಚಿವರು ಅಶೋಕ್‍ಗೆ ಪದೇ ಪದೇ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು.
ಕೈ ಕೊಟ್ಟ ಅಶೋಕ್: ಯಾವಾಗ ಸಚಿವರಿಂದಲೇ ಖುದ್ದು ಕರೆ ಬಂದಿತೋ ಬೆದರಿದ ಅಶೋಕ್, ಯಾತ್ರೆ ಯಶಸ್ವಿಯಾಗದಂತೆ ಒಳ ಹೊಡೆತ ಕೊಟ್ಟರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಮಾವೇಶಗಳು ಎಂದಿಗೂ ವಿಫಲವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಯಾರೇ ಬಂದರೂ ನಿರೀಕ್ಷೆಗೂ ಮೀರಿದ ಜನಸ್ತೋಮ ಇರುತ್ತಿತ್ತು.  ಹೇಳಿಕೇಳಿ ಬೆಂಗಳೂರು ಬಿಜೆಪಿಯ ಭದ್ರಕೋಟೆ. ಅಲ್ಲದೆ ಪಕ್ಷದ ಸಂಘಟನೆಯು ಬೇರು ಮಟ್ಟದಲ್ಲಿ ಸದೃಢವಾಗಿದೆ. 12 ಜನ ಶಾಸಕರು, ಮೂವರು ಸಂಸದರು, 101 ಮಂದಿ ಬಿಬಿಎಂಪಿ ಸದಸ್ಯರು, ರಾಜ್ಯಸಭಾ ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಮೂರು ಲಕ್ಷ ಜನರನ್ನು ಸೇರಿಸುವುದು ದೊಡ್ಡ ಸಮಸ್ಯೆಯೇ ಅಲ್ಲ.

ನ.2ರಿಂದ ಪರಿವರ್ತನ ರ್ಯಾಲಿಗೆ ಆರಂಭವಾಗಲಿದೆ ಎಂದು ಬಿಜೆಪಿ ಮುಖಂಡರು ಮೂರು ತಿಂಗಳಿನಿಂದ ಭಾಷಣ ಬಿಗಿದಿದ್ದರು. ಮೊದಲು ಸಂಘಟನೆ ಉಸ್ತುವಾರಿಯನ್ನು ಶೋಭಾ ಹೆಗಲಿಗೆ ನೀಡಲಾಗಿತ್ತಾದರೂ ಬಳಿಕ ಅಶೋಕ್ ಹೆಗಲಿಗೆ ನೀಡಲಾಗಿತ್ತು.  ಇತ್ತ ಅಶೋಕ್ ಮೇಲಿನ ಪ್ರಕರಣಗಳು ಮರುಜೀವ ಪಡೆದುಕೊಳ್ಳುತ್ತಿದ್ದಂತೆ ಯಾತ್ರೆ ಯಶಸ್ವಿಯಾಗದಿರಲು ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಯಾರೊಬ್ಬರು ನನ್ನ ಅನುಮತಿ ಇಲ್ಲದೆ ಕಾರ್ಯಕರ್ತರನ್ನು ಕರೆತರಬಾರದೆಂದು ತಮ್ಮ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಒಂದು ಲಕ್ಷ ಬೈಕ್ ರ್ಯಾಲಿ ಎಂದು ಹೇಳಲಾಗಿತ್ತಾದರೂ ಅಲ್ಲಿ ಸೇರಿದ್ದು ಕೆಲವೆ ಸಾವಿರಗಳು. ಇಡೀ ರ್ಯಾಲಿಯನ್ನು ಯಶಸ್ವಿಗೊಳಿಸದಿರಲು ಮೊದಲೇ ತೀರ್ಮಾನಿಸಿದ್ದ ಅಶೋಕ್ ಅಂದುಕೊಂಡಂತೆ ಗುರುವಾರ ನಡೆದ ಸಮಾವೇಶ ಸಂಪೂರ್ಣವಾಗಿ ಫ್ಲಾಪ್ ಶೋ ಆಗಿತ್ತು.

ಅಶೋಕ್ ವಿರುದ್ಧ ದೂರು:

ಕಾರ್ಯಕ್ರಮ ಸಂಪೂರ್ಣವಾಗಿ ವಿಫಲಗೊಂಡಿದ್ದರಿಂದ ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವೇದಿಕೆಯಲ್ಲಿದ್ದ ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಪಿಯೂಶ್ ಗೋಯಲ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಸೇರಿದಂತೆ ಮತ್ತಿತರ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಇದೀಗ ರ್ಯಾಲಿ ವಿಫಲಗೊಂಡ ಹಿನ್ನೆಲೆಯಲ್ಲಿ ಅಶೋಕ್ ವಿರುದ್ಧ ಮೊದಲಿನಿಂದಲೂ ವಿರೋಧಿಸುತ್ತಿದ್ದ ಸದಾನಂದಗೌಡ ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ರ್ಯಾಲಿಯ ಹೊಣೆ ಹೊತ್ತಿದ್ದ ಅಶೋಕ್ ಉದ್ದೇಶಪೂರ್ವಕವಾಗಿ ರ್ಯಾಲಿಯನ್ನು ವಿಫಲಗೊಳಿಸಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin