ಕಣಿವೆ ರಾಜ್ಯದಲ್ಲಿ ನಿಲ್ಲದ ಗುಂಡಿನ ಕಾಳಗ : 3 ಉಗ್ರರು ಹತ್ಯೆ, ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Firing--0141

ಶ್ರೀನಗರ, ನ.7-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಗುಂಡಿನ ಚಕಮಕಿ ಮತ್ತು ಸಾವು-ನೋವು ದಿನನಿತ್ಯದ ಸುದ್ದಿಯಾಗಿದೆ. ಪುಲ್ಮಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾಪಡೆಯೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಜೈಷ್-ಇ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ಮೂವರು ಹತರಾಗಿದ್ದು, ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಈ ಎನ್‍ಕೌಂಟರ್‍ನಲ್ಲಿ ನಾಗರಿಕರೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.

ಈ ತಿಂಗಳ ಆರಂಭದಿಂದಲೂ ಕಾಶ್ಮೀರದ ವಿವಿಧೆಡೆ ಜೈಷ್ ಮತ್ತು ಲಷ್ಕರ್-ಎ-ತೈಬಾ (ಎಲ್‍ಇಟಿ) ಭಯೋತ್ಪಾದಕರು ಸೇನಾ ಶಿಬಿರ ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಇಂದು ಭಾರೀ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ರೂಪಿಸಿದ್ದ ಸಂಚನ್ನು ಯೋಧರು ವಿಫಲಗೊಳಿಸಿದ್ದಾರೆ.  ಪುಲ್ವಾಮ ಜಿಲ್ಲೆಯ ಅಖ್ಲರ್ ಕಂಡಿ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಸುಳಿವಿನ ಮೇಲೆ ಭದ್ರತಾ ಪಡೆಗಳು ನಿನ್ನೆ ರಾತ್ರಿಯಿಂದಲೇ ಆ ಪ್ರದೇಶವನ್ನು ಸುತ್ತವರೆದು ಶೋಧ ಮುಂದುವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಭಯೋತ್ಪಾದಕರು ಇಂದು ನಸುಕಿನಲ್ಲಿ ಗುಂಪು ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿತು. ಈ ಆಕ್ರಮಣದಲ್ಲಿ ಯೋಧರೊಬ್ಬರು ಹುತಾತ್ಮರಾದರು.

ಉಗ್ರರ ಹಠಾತ್ ದಾಳಿಗೆ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಮೂವರು ಜೈಷ್ ಉಗ್ರರು ಹತರಾದರು. ಉಳಿದವರು ಪರಾರಿಯಾದರು.  ಹತ ಉಗ್ರರು ಜೈಷ್ ಸಂಘಟನೆಗೆ ಸೇರಿದವರೆಂದು ಖಚಿತಪಟ್ಟಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.  ಪರಾರಿಯಾಗಿರುವ ಅಥವಾ ಈ ವಲಯದಲ್ಲಿ ಅಡಗಿರುವ ಇತರೆ ಉಗ್ರರಿಗಾಗಿ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.

ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯಗಳನ್ನು ಎಸಗುವುದಾಗಿ ಜೈಷ್ ಮುಖ್ಯಸ್ಥ ಹಾಗೂ ಪಠಾಣ್‍ಕೋಟ್ ದಾಳಿ ಸೂತ್ರಧಾರ ಮಸೂದ್ ಅಜರ್ ಘೋಷಿಸಿದ್ದ ಆಡಿಯೋ ಕ್ಲಿಪ್ ನಿನ್ನೆಯಷ್ಟೇ ಬಹಿರಂಗಗೊಂಡಿತ್ತು.  ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಭಾನುವಾರ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಲಾಗಿತ್ತು.
ಮಚಿಲ್ ಸೆಕ್ಟರ್‍ನಲ್ಲಿ ಗಡಿಯೊಳಗೆ ನುಸುಳುವ ಭಯೋತ್ಪಾದಕರ ಯತ್ನವನ್ನು ಶನಿವಾರ ವಿಫಲಗೊಳಿಸಿದ್ದ ಸೇನಾ ಪಡೆ ಉಗ್ರನೊಬ್ಬನನ್ನು ಕೊಂದು ಹಾಕಿತ್ತು.
ಅವಂತಿಫೋರ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಉಗ್ರನೊಬ್ಬ ಬಲಿಯಾಗಿದ್ದನು ಇಲ್ಲಿ ಉಲ್ಲೇಖಿಸಬಹುದು.  ಕಾಶ್ಮೀರ ಕಣಿವೆಯಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಉಗ್ರರ ಉಪಟಳ ಮುಂದುವರಿದಿದೆ.

Facebook Comments

Sri Raghav

Admin