ಚಿಂತಾಮಣಿ ಜನರನ್ನು ಚಿಂತೆಗೀಡು ಮಾಡಿವೆ ಬೀದಿ ನಾಯಿಗಳು

ಈ ಸುದ್ದಿಯನ್ನು ಶೇರ್ ಮಾಡಿ

dogs

ಚಿಂತಾಮಣಿ ನಗರದ ಪ್ರಮುಖ ಬಡಾವಣೆಗಳ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಓಡಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಒಂದೊಂದು ಬಡಾವಣೆಯಲ್ಲೂ ಕನಿಷ್ಠ 8 ರಿಂದ 10 ಬೀದಿ ನಾಯಿಗಳ ಹಿಂಡು ಸಂಚರಿಸುತ್ತಾ ಜನರಲ್ಲಿ ಆತಂಕ ಉಂಟು ಮಾಡಿದೆ. ನಗರದಾದ್ಯಂತ ಹಾದಿ ಬೀದಿಗಳಲ್ಲಿ ಬೀಡುಬಿಟ್ಟಿ ರುವ ನಾಯಿಗಳ ಹಾವಳಿಯಿಂದ ಜನರು ಹಗಲು ಮತ್ತು ರಾತ್ರಿ ಒಬ್ಬಂಟಿಯಾಗಿ ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದಾರೆ. ಮಕ್ಕಳು ಮನೆಯ ಮುಂದೆ ಆಟವಾಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಆದರೆ ನಗರಸಭೆ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಶಾಲೆಗಳಿಗೆ ಮಕ್ಕಳನ್ನು ಪೋಷಕರು ತಾವೇ ಖುದ್ದು ಕರೆದೊಯ್ದು, ಕರೆತರುವಂತಹ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮಕ್ಕಳಿಗೆ ಎಲ್ಲಿ ಬೀದಿ ನಾಯಿಗಳು ಕಚ್ಚುತ್ತವೋ ಎಂಬ ಆತಂಕ ಸ್ಥಳೀಯರದಾಗಿದ್ದು, ಮಕ್ಕಳನ್ನು ಹೊರಗೆ ಬಿಡದೆ ಮನೆಯಲ್ಲಿಯೇ ಕೂರಿಸುತ್ತಿದ್ದರೆ, ಇನ್ನೂ ನಗರದ ಕೆಲ ದೇವಾಲಯಗಳ ಬಳಿ ಸಹ ನಾಯಿಗಳ ಹಾವಳಿ ಜಾಸ್ತಿಯಾಗಿ ದೇವಾಲಯಕ್ಕೆ ಬರುವವರು ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಹೋಗುವಂತಹ ಪರಿಸ್ಥಿತಿ ಒದಗಿಬಂದಿದೆ. ಈ ಬೀದಿ ನಾಯಿಗಳು ಹಲವು ಕಡೆಗಳಲ್ಲಿ ಬೈಕ್ ಸವಾರರನ್ನು ಅಟ್ಟಿಸಿಕೊಂಡು ಹೋಗುವುದರಿಂದ ಸವಾರರು ಬೈಕಿನಿಂದ ಬಿದ್ದು ಆಸ್ಪತ್ರೆಗೆ ಸೇರಿರುವ ಘಟನೆಗಳು ನಡೆದಿವೆ. ದಿನೇ ದಿನೇ ಬೀದಿ ನಾಯಿಗಳ ಸಮಸ್ಯೆ ಬಹುತೇಕ ಬಡಾವಣೆಗಳಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ, ಚುನಾಯಿತ ನಗರಸಭಾ ಸದಸ್ಯರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

dogs-1

ಸಾರ್ವಜನಿಕರನ್ನು ನಾಯಿಗಳು ಕಚ್ಚಿ ಗಾಯ ಗೊಳಿಸಿದ ನಂತರ ಜನ ರೊಚ್ಚಿಗೆದ್ದು ನಗರ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮುನ್ನ ಎಚ್ಚೆತ್ತುಕೊಂಡು ನಾಯಿಗಳ ನಿಯಂತ್ರಣ ಮಾಡಬೇಕು ಎಂದು ಅಶ್ವಿನಿ ಬಡಾವಣೆ ನಿವಾಸಿ ರಾಮಚಂದ್ರರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ಹಾವಳಿ ಬಗ್ಗೆ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಪೌರಾಯುಕ್ತರೊಂದಿಗೆ ಚರ್ಚೆ ನಡೆಸಿ ಮುಂದಿನ ಸಭೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಿದ್ದಾರೆಯೇ ಹೊರತು ಇದುವರೆವಿಗೂ ಆ ಕೆಲಸ ಆಗಿಲ್ಲ ಎಂದು ರಾಜೀವನಗರದ ನಿವಾಸಿ ಮಂಜುಳಾ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಗರಸಭಾ ಸದಸ್ಯ ತೌಡು ಮಂಜುನಾಥ, ನಗರದಾದ್ಯಂತ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ, ನಗರಸಭೆಯನ್ನು ನಿಯಂತ್ರಣ ಮಾಡುವ ಪೌರಾಯುಕ್ತರು, ಆಡಳಿತ ಪಕ್ಷದವರು, ಶಾಸಕರು ಸೇರಿದಂತೆ ಯಾರೂ ಗಮನಹರಿಸದ ಪರಿಣಾಮ ನಾಯಿಗಳ ನಿಯಂತ್ರಣ ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin