ಚಿಕ್ಕಮಗಳೂರು ಕಾಂಗ್ರೆಸ್ ಭದ್ರಕೋಟೆ ಆಗಲಿದೆ : ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--01

ಚಿಕ್ಕಮಗಳೂರು, ನ.7- ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರು ಪುನರ್‍ಜನ್ಮ ನೀಡಿದ ಜಿಲ್ಲೆಯಾಗಿದ್ದು, 2018ರ ಚುನಾವಣೆಯಲ್ಲಿ ಮರಳಿ ಕಾಂಗ್ರೆಸ್ ಭದ್ರಕೋಟೆ ಆಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಳೆದ ಮೂರು ವರ್ಷದ ಅವಧಿಯಲ್ಲಿ ವಾಸ್ತವವಾಗಿ ಜನತೆಗೆ ಏನು ಕೊಡುಗೆ ನೀಡಿದೆ? ನೋಟು ಅಮಾನೀಕರಣ ಮಾಡಿದ್ದು, ಜಿಎಸ್‍ಟಿ ಜಾರಿ ಮಾಡಿದ್ದು, ಸಿಬಿಐ ಸೇರಿದಂತೆ ಇನ್‍ಕಮ್ ಟ್ಯಾಕ್ಸ್ ಇನ್ನಿತರೆ ಸಂಸ್ಥೆಗಳಿಂದ ಬಿಜೆಪಿಯೇತರರಿಗೆ ತೊಂದರೆ ನೀಡಿದ್ದು ಮತ್ತು ನೀಡುತ್ತಿರುವುದು ಇದೇ ಅವರ ಕೊಡುಗೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಚುನಾವಣೆಯಲ್ಲಿ ನೀಡಿದ ಯಾವ ಆಶ್ವಾಸನೆಯನ್ನೂ ಬಿಜೆಪಿ ಈಡೇರಿಸಿಲ್ಲ. ಈಗ ಪ್ಯಾರಡೈಸ್ ದಾಖಲೆಯಲ್ಲಿ ಕೇಂದ್ರ ಸಚಿವರ, ಸಂಸದರ ಹೆಸರು ಕೂಡ ಕೇಳಿಬರುತ್ತಿದೆ. ಮೋದಿ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ, ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಪರಿಚಯಿಸಿದ್ದು, ದೇಶದಲ್ಲಿ ಮಾದರಿ ರಾಜ್ಯವಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಪ್ರಥಮವಾಗಿದೆ ಎಂದ ಅವರು, ನ.8ರಂದು ನೋಟು ಅಮಾನೀಕರಣ ಮಾಡಿದ ದಿನವನ್ನು ಬ್ಲಾಕ್ ಡೇ ಎಂಬುದಾಗಿ ರಾಷ್ಟ್ರಾದ್ಯಂತ ಆಚರಣೆ ಮಾಡಲಾಗುವುದು ಎಂದರು.

ಜಿಎಸ್‍ಟಿ ಕಾರ್ಯಗತಗೊಳಿಸುವಲ್ಲಿಯೂ ಕೇಂದ್ರ ಸೂಕ್ತ ಕ್ರಮ ಕೈಗೊಂಡಿಲ್ಲ. ಮನೆ ಮನೆಗೆ ಕಾಂಗ್ರೆಸ್ ಎಂಬ ಉತ್ತಮ ಕಾರ್ಯಕ್ರಮ ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿದ್ದು, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮನೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ಚುನಾವಣೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, 2018ರ ಚುನಾವಣೆಗೆ ತಯಾರಿ ಆರಂಭವಾಗಿದ್ದು, ಸರ್ಕಾರವು ಸಾಧನೆಗಳ ಕಿರು ಹೊತ್ತಿಗೆ ಹೊರತಂದಿದ್ದು, 6.5 ಲಕ್ಷ ಕಾರ್ಯಕರ್ತರು 54 ಸಾವಿರ ಬೂತ್‍ಗಳಲ್ಲಿ ಮನೆ ಮನೆಗೆ ತೆರಳಿ ಕಿರು ಹೊತ್ತಿಗೆ ಹಂಚಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ನೀಡುವಂತೆ ಪ್ರಚಾರ ನಡೆಸಲಾಗುತ್ತದೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದು, ಸರ್ಕಾರದ ಸಾಧನೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲವನ್ನೂ ಅನುಷ್ಠಾನಗೊಳಿಸಿದ್ದೇವೆ. ಹಾಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ತರಿಕೆರೆ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ವಿಜಯ್‍ಕುಮಾರ್, ಮುಖಂಡರಾದ ಗೋಪಾಲ್ ಬಂಡಾರಿ, ಬಿ.ಎಲ್.ಶಂಕರ್, ಶಿವಾನಂದಸ್ವಾಮಿ, ಗಾಯತ್ರಿ ಶಾಂತೇಗೌಡ, ಮಹೇಶ್ ಮತ್ತಿತರರಿದ್ದರು.

Facebook Comments

Sri Raghav

Admin