ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ, ಮನ್ನಾ ಆಗಲಿದೆ ರೈತರ ಎಲ್ಲಾ ಸಾಲ

ಈ ಸುದ್ದಿಯನ್ನು ಶೇರ್ ಮಾಡಿ

Kumar-Mysuer-010

ಮೈಸೂರು, ನ.7- ನಮ್ಮ ಪಕ್ಷದ ವಿಕಾಸ ಯಾತ್ರೆ ಇಂದಿನಿಂದ ಪ್ರಾರಂಭವಾಗಿದ್ದು, ಈ ಯಾತ್ರೆಯ ಮೂಲಕ ನಾವು ಇತರ ಯಾವುದೇ ಪಕ್ಷಗಳಿಗೆ ಸಂದೇಶ ನೀಡಬೇಕಾಗಿಲ್ಲ. ನಮ್ಮ ಸಂದೇಶ ಏನೇ ಇದ್ದರೂ ಜನತೆಗೆ. ಈ ಬಾರಿ ಜನರ ಆಶೀರ್ವಾದ ಪಡೆದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ 113 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರುವುದೇ ನಮ್ಮ ಗುರಿ ಎಂದರು.

ಕರ್ನಾಟಕದ ಅಧಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಡೀ ಕುಟುಂಬ ಸಮೇತ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವು ಅಧಿಕಾರಕ್ಕೆ ಬಂದ ನಂತರ ರಾಜ್ಯದ ಎಲ್ಲಾ ರೈತರ ಎಲ್ಲಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಾವು ಯಾವ ಕಾರಣಕ್ಕೂ ಮಾತು ತಪ್ಪುವುದಿಲ್ಲ. ಜೆಡಿಎಸ್ ಎಂದರೆ ನುಡಿದಂತೆ ನಡೆಯುವ ಪಕ್ಷ. ನಮ್ಮ ಉದ್ದೇಶ ರೈತರ ಸಾಲ ಮನ್ನಾ ಮಾಡುವುದು ಮತ್ತು ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸುವುದು ಎಂದು ಹೇಳಿದರು.

ನಮ್ಮ ಪಕ್ಷವನ್ನು ತೊರೆದು ಹೋಗಿದ್ದವರೆಲ್ಲಾ ಈಗ ಪುನಃ ಪಕ್ಷಕ್ಕೆ ಮರಳಿ ಬರುತ್ತಿದ್ದಾರೆ. ಹಾಗಾಗಿ ಪಕ್ಷ ಸದೃಢವಾಗಿದೆ ಎಂದರು. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರೂ ಕೂಡ ಪಕ್ಷಕ್ಕೆ ಬರುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರ ನೀಡದೆ ಕಾದು ನೋಡಿ ಎಂದ ಅವರು, ಕಡೆ ಗಳಿಗೆಯಲ್ಲಿ ಪಕ್ಷಕ್ಕೆ ಬರುವವರಿಗೆ ರತ್ನಗಂಬಳಿ ಸ್ವಾಗತವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಹುತೇಕ ಪ್ರಸ್ತುತ ಸಮೀಕ್ಷೆಗಳ ಪ್ರಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ 65 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ನಾವು ಮೂರಂಕಿ ಸಾಧಿಸಿ (113) ಅಧಿಕಾರಕ್ಕೆ ಬರಲಿದ್ದೇವೆ. ಜೆಡಿಎಸ್ ಅಂದರೆ ಜೀರೋ ಎನ್ನುತ್ತಿದ್ದ ಜನರಿಗೆ ನಮ್ಮ ಬಲ ಏನು ಎಂಬುದನ್ನು ತೋರಿಸಲಿದ್ದೇವೆ. ಇಂದಿನಿಂದ ಆರಂಭವಾಗಿರುವ ಈ ಯಾತ್ರೆ ಇಡೀ ರಾಜ್ಯದಲ್ಲಿ ಸಂಚರಿಸಿ 113ರ ಗುರಿ ಸಾಧಿಸಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪತ್ನಿ ಚನ್ನಮ್ಮ, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಜೆಡಿಎಸ್ ನಾಯಕರಾದ ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ಟಿ.ಎ.ಶರವಣ ಮತ್ತಿತರರು ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಸಮೀಪದ ಉತ್ತನಹಳ್ಳಿಯಲ್ಲಿರುವ ತ್ರಿಪುರ ಸುಂದರಿ ದೇವಿಗೆ ಪೂಜೆ ಸಲ್ಲಿಸಿ ಆನಂತರ ಹಿನಕಲ್‍ನಲ್ಲಿರುವ ಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಇದಾದ ನಂತರ ಕುಮಾರ ಪರ್ವ ವಿಕಾಸ ಯಾತ್ರೆಯ ವಿಕಾಸ ವಾಹಿನಿ ರಥಕ್ಕೆ ಎಚ್.ಡಿ.ದೇವೇಗೌಡ ದಂಪತಿ ಹಸಿರು ನಿಶಾನೆ ತೋರಿಸಿದರು.
ಅಲ್ಲಿಂದ ವಿಕಾಸ ವಾಹಿನಿ ರಥ ಪ್ರಪ್ರಥಮವಾಗಿ ವಿಕಾಸ ಯಾತ್ರೆ ಸಮಾವೇಶ ನಡೆಯಲಿರುವ ಲಿಂಗದೇವರ ಕೊಪ್ಪಲಿಗೆ ತೆರಳಿತು.

Facebook Comments

Sri Raghav

Admin