ನ.9ರಂದು ಜಾವ್ಡೇಕರ್ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ

Prakash-Jawdekar--01

ಬೆಂಗಳೂರು, ನ.7-ಕರ್ನಾಟಕ ಬಿಜೆಪಿ 2018ರ ಚುನಾವಣಾ ಪ್ರಚಾರಕ್ಕೆ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮೂಲಕ ಚಾಲನೆ ನೀಡಿದೆ. ನ.9ರಂದು ಯಾತ್ರೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಕರ್ನಾಟಕ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಪ್ರಕಾಶ್ ಜಾವ್ಡೇಕರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕರ್ನಾಟಕ ಬಿಜೆಪಿಯ ಪರಿವರ್ತನಾ ಯಾತ್ರೆ ನ.8ರಂದು ಮಡಿಕೇರಿ ತಲುಪಲಿದ್ದು, ಸಾರ್ವಜನಿಕರ ಸಭೆ ನಂತರ ಅಂತ್ಯಗೊಳ್ಳಲಿದ್ದು, ನ.9ರಂದು ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಆದ್ದರಿಂದ, ಅಂದು ಮಂಗಳೂರಿನಲ್ಲಿ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.  ನ.10ರಂದು ಸುಳ್ಯದಿಂದ ಬಿಜೆಪಿಯಾತ್ರೆ ಪುನಃ ಆರಂಭವಾಗಲಿದೆ.

ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾವೇಶದ ಬಗ್ಗೆ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆಯಲಿದೆ. ಸಮಾವೇಶಕ್ಕೆ ಕಡಿಮೆ ಜನರು ಬರಲು ಕಾರಣವೇನು? ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಾಗಲೇ ವರದಿ ಕೇಳಿದ್ದಾರೆ. ಆದ್ದರಿಂದ, ಕೋರ್ ಕಮಿಟಿ ಸಭೆಯಲ್ಲಿ ನಡೆಯುವ ಚರ್ಚೆ ಕುತೂಹಲಕ್ಕೆ ಕಾರಣವಾಗಿದೆ. ಸಭೈಯ ಬಳಿಕ ಪ್ರಕಾಶ್ ಜಾವ್ಡೇಕರ್ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಮಾಧ್ಯಮಗಳ ಜೊತೆ ಮಾತನಾಡಲಿರುವ ಅವರು ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾವೇಶದ ಕುರಿತು ಮಾತನಾಡುವ ಸಾಧ್ಯತೆ ಇದೆ.

ಪ್ರಮುಖ ವಿಷಯಗಳು : 

ಪಕ್ಷದ ನವ ಕರ್ನಾಟಕ ನಿರ್ಮಾಣ ಯಾತ್ರೆಗೆ ಸಿಗುತ್ತಿರುವ ಬೆಂಬಲ, ಮುಂದಿನ ಕಾರ್ಯತಂತ್ರಗಳ ಬಗ್ಗೆ ರಾಜ್ಯ ನಾಯಕರ ಜೊತೆ ಪ್ರಕಾಶ್ ಜಾವ್ಡೇಕರ್ ಚರ್ಚೆ ನಡೆಸಲಿದ್ದಾರೆ. ಯಾತ್ರೆ ಆರಂಭವಾಗಿ 6 ದಿನಗಳ ಬಳಿಕ ಈ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ನೈರುತ್ಯ ಪದವೀಧರ, ನೈರುತ್ಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ನವೆಂಬರï 9ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನ.14ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತದೆ. ಅಧಿವೇಶನದ ಜೊತೆ-ಜೊತೆಗೆ ಯಾತ್ರೆಯೂ ನಡೆಯುವುದರಿಂದ ಯಾವ-ಯಾವ ನಾಯಕರು ಪಾಲ್ಗೊಳ್ಳಬೇಕು ಎಂದು ರೂಪುರೇಷೆ ಸಿದ್ಧಪಡಿಸಲಾಗುತ್ತದೆ.

ಕೆ.ಜೆ.ಜಾರ್ಜ್ ವಿರುದ್ಧ ಹೋರಾಟ : 

ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಹೋರಾಟ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಜಾರ್ಜ್ ವಿರುದ್ಧ ನಡೆಸಬೇಕಾಗಿದ್ದ ಒಂದು ದಿನದ ಹೋರಾಟವನ್ನು ಬಿಜೆಪಿ ವಾಪಸ್ ಪಡೆದಿತ್ತು. ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ನಡೆಸುವ ಸಾಧ್ಯತೆ ಇದೆ.

Facebook Comments

Sri Raghav

Admin