ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನ.10ಕ್ಕೆ : ಹೆಚ್ಚಿದ ಆಕಾಂಕ್ಷಿಗಳ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

bbmp

ಬೆಂಗಳೂರು, ನ.7- ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ನ.10ರಂದು ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಾಗಿದೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರರ ಮೈತ್ರಿಯೊಂದಿಗೆ ಆಡಳಿತದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ನ.10ರಂದು ಚುನಾವಣೆ ಘೋಷಣೆಯಾಗಿದ್ದು, 9ಕ್ಕೆ ನಾಮಪತ್ರ ಸಲ್ಲಿಸಬೇಕಾಗಿದೆ.  ಈಗಾಗಲೇ ನಡೆಯಬೇಕಿದ್ದ ಚುನಾವಣೆ ಒಂದು ಬಾರಿ ಮುಂದೂಡಿಕೆಯಾಗಿದ್ದು, ವಿಳಂಬವಾಗಿದ್ದ ಕಾರಣ ಸಹಜವಾಗಿಯೇ ಆಕಾಂಕ್ಷಿಗಳು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿರುವವರ ಸಂಖ್ಯೆ ಹೆಚ್ಚಾಗಿದೆ.

12 ಸ್ಥಾಯಿ ಸಮಿತಿಗಳಲ್ಲಿ ಅಧಿಕಾರ ಹಂಚಿಕೆ ಹಿನ್ನೆಲೆಯಲ್ಲಿ ನಾಲ್ಕು ಜೆಡಿಎಸ್, ನಾಲ್ಕು ಕಾಂಗ್ರೆಸ್, ನಾಲ್ಕು ಪಕ್ಷೇತರರಿಗೆ ನೀಡಬೇಕಾಗಿದೆ. ಆದರೆ, ಈ ಬಾರಿ ಜೆಡಿಎಸ್‍ನವರು ಒಂದು ಸ್ಥಾಯಿ ಸಮಿತಿಯನ್ನು ಹೆಚ್ಚುವರಿಯಾಗಿ ಕೇಳುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಎರಡು-ಮೂರು ಬಾರಿ ಗೆದ್ದವರು ಹೆಚ್ಚಾಗಿರುವುದರಿಂದ ಅಲ್ಲದೆ ಮೇಯರ್ ಸ್ಥಾನಕ್ಕೂ ಪೈಪೋಟಿ  ನಡೆಸಿ ಸ್ಥಾನ ವಂಚಿತರಾಗಿರುವವರಿಂದ ಕನಿಷ್ಠ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವಾದರೂ ಸಿಗುತ್ತದೆ ಎಂಬ ನಿರೀಕ್ಷೆ ಹಿನ್ನೆಲೆಯಲ್ಲಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಲೆಬಿಸಿಯಾಗಿದೆ.

ಈ ಹಿಂದೆಯೇ ಚುನಾವಣೆ ನಡೆದಿದ್ದರೆ ಹೇಗೋ ಆಗಿ ಹೋಗುತ್ತಿತ್ತು. ಆದರೆ, ಈಗ ಆಕಾಂಕ್ಷಿಗಳ ಹಕ್ಕೊತ್ತಾಯಗಳು ಹೆಚ್ಚಾಗಿ ನಾಯಕರುಗಳ ಮೇಲೆ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಸಂಜೆ ಸಭೆ ಸೇರಲಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜಾರ್ಜ್ ಮತ್ತು ಇನ್ನಿತರೆ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ರಾಮಲಿಂಗಾರೆಡ್ಡಿಯವರ ಕ್ಷೇತ್ರದ ಸದಸ್ಯರಾದ ಬಿಬಿಎಂಪಿ ಸದಸ್ಯ ಮಂಜುನಾಥ್, ಸಚಿವ ಜಾರ್ಜ್ ಕ್ಷೇತ್ರದ ಸದಸ್ಯರಾದ ಲಾವಣ್ಯ ಗಣೇಶ್, ದಿನೇಶ್ ಗುಂಡೂರಾವ್ ಅವರ ಕ್ಷೇತ್ರದ ಸದಸ್ಯರಾದ ಗೋವಿಂದರಾಜ್, ಹ್ಯಾರಿಸ್ ಕ್ಷೇತ್ರದ ಸದಸ್ಯರಾದ ಸೌಮ್ಯ ಶಿವಕುಮಾರ್, ಭೈರತಿ ಬಸವರಾಜ್ ಅವರ ಕೆಆರ್ ಪುರ ಕ್ಷೇತ್ರದ ಕೆಲ ಸದಸ್ಯರು, ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರದ ಸದಸ್ಯರಾದ ಆರ್.ಎ.ಶ್ರೀನಿವಾಸ್, ರಾಜಣ್ಣ, ವಾಸುದೇವಮೂರ್ತಿ, ಸಂಸದ ಡಿ.ಕೆ.ಸುರೇಶ್ ಅವರ ಬೆಂಬಲಿಗರಾದ ವೇಲು ನಾಯ್ಕರ್, ಆಂಜನಪ್ಪ, ರಾಜಾಜಿನಗರದ ಜಿ.ಕೃಷ್ಣಮೂರ್ತಿ, ಮಂಜುನಾಥ್ ಮುಂತಾದವರು ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟು ತೀವ್ರ ಲಾಬಿ ನಡೆಸಿದ್ದಾರೆ.

ಇದಲ್ಲದೆ, ಮೂರನೆ ಬಾರಿ ಗೆಲುವು ಸಾಧಿಸಿರುವ ಜಾಕಿರ್ ಹುಸೇನ್, ಕೇಶವಮೂರ್ತಿ ಅವರು ಕೂಡ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಇರುವ ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಯಾರಿಗೆ ನೀಡಿ ಸಮಾಧಾನ ಮಾಡಬೇಕೆಂಬುದು ನಾಯಕರುಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಜೆಡಿಎಸ್ ನಮಗೇ ನೀಡಬೇಕೆಂದು ಒತ್ತಾಯಿಸಿದೆ. ಅದನ್ನು ನೀಡಿದರೆ ಅರ್ಧ ಅಧಿಕಾರ ಜೆಡಿಎಸ್‍ಗೆ ನೀಡಿದಂತಾಗುತ್ತದೆ. ಅದರ ಬದಲು ಬೇರೆ ಸ್ಥಾಯಿ ಸಮಿತಿ ಹೊಣೆಯನ್ನು ಜೆಡಿಎಸ್‍ಗೆ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದ್ದು, ಕಾಂಗ್ರೆಸ್-ಜೆಡಿಎಸ್ ನಡುವೆ ಈ ವಿಷಯದಲ್ಲಿ ಹಗ್ಗ-ಜಗ್ಗಾಟ ಮುಂದುವರಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾಯಿ ಸಮಿತಿ ಅಧ್ಯಕ್ಷ ಪದವಿಗೆ ಒತ್ತಡ ಹೆಚ್ಚಾದರೆ ಪಕ್ಷೇತರರು ಎರಡು ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಏನಾಗುತ್ತದೆ ಎಂಬುದು ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ.

Facebook Comments

Sri Raghav

Admin