ಮದ್ಯದ ಬ್ರಾಂಡ್‍ಗಳಿಗೆ ಬಾಬಿ, ಜ್ಯೂಲಿ ಹೆಸರಿಡಿ..

ಈ ಸುದ್ದಿಯನ್ನು ಶೇರ್ ಮಾಡಿ

girish

ಮುಂಬೈ, ನ.7-ವಿವಿಧ ಬ್ರಾಂಡ್‍ನ ಮದ್ಯಗಳಿಗೆ ಬಾಬಿ, ಜ್ಯೂಲಿ ಹೀಗೆ ಮಹಿಳೆಯರ ಆಕರ್ಷಕ ಹೆಸರುಗಳನ್ನು ಇಟ್ಟು ಅವುಗಳ ಮಾರಾಟ ಹೆಚ್ಚಿಸಿ..! ಇದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಗಿರೀಶ್ ದತ್ತಾತ್ರೇಯ ಮಹಾಜನ್ ನೀಡಿರುವ ಹೊಸ ಐಡಿಯಾ..!! ಸಚಿವರ ಈ ವಿವಾದಿತ ಹೇಳಿಕೆ ಹೊರ ಬೀಳುತ್ತಿದ್ದಂತೆ ಶಿವಸೇನೆ ಮತ್ತು ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಸಚಿವ ಗಿರೀಶ್‍ರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‍ರನ್ನು ಆಗ್ರಹಿಸಿದೆ.

ಮಹಾರಾಜ ಬ್ರಾಂಡ್ ಮದ್ಯವನ್ನು ತಯಾರಿಸುವ ಸಕ್ಕರೆ ಕಾರ್ಖಾನೆಯೊಂದು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಸಚಿವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಸ್ತುಗಳು ಮಹಿಳೆಯರ ಹೆಸರಿನಲ್ಲಿ ಮಾರಾಟವಾಗುತ್ತಿದೆ. ತಂಬಾಕು ಉತ್ಪನ್ನಗಳೂ ಕೂಡ ಮಹಿಳೆಯರ ಹೆಸರನ್ನು ಹೊಂದಿರುವುದರಿಂದ ಹೆಚ್ಚು ಮಾರಾಟವಾಗುತ್ತಿವೆ. ಮದ್ಯದ ಬ್ರಾಂಡ್‍ಗಳಿಗೆ ಮಹಿಳೆಯರ ಹೆಸರಿಟ್ಟರೆ ಅವುಗಳ ಮಾರಾಟ ವನ್ನು ಹೆಚ್ಚಿಸಬಹುದು ಎಂದರು. ಬಿಜೆಪಿ ಮದ್ಯದ ಪರ ವಾಗಿದೆ ಎಂಬುದಕ್ಕೆ ಸಚಿವರ ಈ ಹೇಳಿಕೆಯೇ ಸಾಕ್ಷಿ. ಮಹರಾಷ್ಟ್ರದ ವಿವಿಧೆಡೆ ಮಧ್ಯ ಮಾರಾಟದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವಾಗ ಗಿರೀಶ್ ಮಹಾಜನ್ ಅವರ ಹೇಳಿಕೆ ದುರದೃಷ್ಟಕರ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿದೆ. ಸಚಿವರ ಹೇಳಿಕೆಯನ್ನು ಗಮನಿಸಿದಾಗ ಅವರು ರಾತ್ರಿ ನಾಲ್ಕು ಬಾಟಲ್ ಮಹಾರಾಜ ಮದ್ಯ ಸೇವಿಸಿರಬೇಕು ಎಂದು ಎನ್‍ಸಿಪಿ ನಾಯಕ ನವಾಬ್ ಮಾಲಿಕ್ ಲೇವಡಿ ಮಾಡಿದ್ದಾರೆ.

ಸಚಿವರ ಕ್ಷಮೆ: ತಾವು ನೀಡಿರುವ ಹೇಳಿಕೆಗೆ ಕ್ಷಮೆ ಕೋರಿರುವ ಸಚಿವರು, ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin