ಎಲ್ಲಾ ಜಯಂತಿಗಳಿಗೂ ಸರ್ಕಾರಿ ರಜೆ ಬೇಡ : ಚಂಪಾ

ಈ ಸುದ್ದಿಯನ್ನು ಶೇರ್ ಮಾಡಿ

campa

ಬೆಂಗಳೂರು,ನ.8-ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕನ್ನಡ ರಾಜ್ಯೋತ್ಸವ ಇವುಗಳನ್ನು ಹೊರತುಪಡಿಸಿ ಯಾವುದೇ ಜಯಂತಿಗಳಿಗೆ ಸರ್ಕಾರಿ ರಜೆ ಘೋಷಿಸಬಾರದು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ . ಚಂದ್ರಶೇಖರ್ ಪಾಟೀಲ ಅವರು ಸರ್ಕಾರಕ್ಕೆ ಮನವಿ ಮಾಡಿದರು. ಬೆಂಗಳೂರು ಪ್ರೆಸ್‍ಕ್ಲಬ್, ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ಪತ್ರಕರ್ತರು, ಸಾಹಿತಿಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರ ಮೇಲೆ ಪ್ರಜಾಪ್ರಭುತ್ವ ಸದಾ ಕಣ್ಣಿಟ್ಟಿರುತ್ತದೆ. ಹಾಗಾಗಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.

ಟಿಪ್ಪು ಜಯಂತಿಯನ್ನು ವಿರೋಧಿಸುವಿರೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚಂಪಾ ಅವರು, ಟಿಪ್ಪುವಿನ ಬಗ್ಗೆ ಎರಡು ವಾದಗಳಿವೆ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ವೀರ ಸೇನಾನಿ ಎಂದು ಹೇಳಲಾಗುತ್ತದೆ. ಮತ್ತೊಂದು ವರ್ಗ ಟಿಪ್ಪು ಸ್ವಾರ್ಥಕ್ಕಾಗಿ ಹೋರಾಡಿದ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನಲ್ಲ. ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ದ ಹೋರಾಡಿದ್ದಾನೆ ಎಂದು ವಾದಿಸುತ್ತಾರೆ. ಹಾಗಾಗಿ ನಾನು ಇತಿಹಾಸದ ವಿದ್ಯಾರ್ಥಿ ಅಲ್ಲದಿರುವುದರಿಂದ ನಾನು ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಹೇಳಿದರು. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡಿಕೆ ವಿಷಯ ಹಳೆಯದು.

ನಮ್ಮ ರಾಜ್ಯಕ್ಕೆ ಲಾಂಛನ ಬೇಕೆಂಬ ಮನೋಭಾವ ಅನೇಕ ಕವಿಗಳಿಗೂ ಇತ್ತು. ಕರ್ನಾಟಕ ಏಕೀಕರಣದ ಸಂದರ್ಭದಲ್ಲೂ ಪ್ರತ್ಯೇಕ ಧ್ವಜದ ಬಗ್ಗೆ ಕೇಳಿಬಂದಿತ್ತು. ಕೆಂಪು-ಹಳದಿ ಬಣ್ಣದ ಬಾವುಟವನ್ನು ನಾವು ಭಾವನಾತ್ಮಕವಾಗಿ ಸ್ವೀಕರಿಸಿದ್ದೇವೆ. ಈ ಧ್ವಜಕ್ಕೆ ಕಾನೂನಿನ ಮಾನ್ಯತೆ ದೊರೆಯಬೇಕಿದೆ ಎಂದು ಹೇಳಿದರು. ಪ್ರತಿ ಬಾರಿ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೊಳಿಸಲು ರಾಜ್ಯಾದ್ಯಂತ ಕಸಾಪ ಅಧ್ಯಕ್ಷರೊಂದಿಗೆ ಪ್ರವಾಸ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಕನ್ನಡ ಭಾಷೆ ಬೆಳವಣಿಗೆಯಾಗಬೇಕಾದರೆ ಕ್ರಿಯಾ ಯೋಜನೆ ಸಂಪೂರ್ಣವಾಗಿರಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕ ಮೇಲೆ ಆ ಕೆಲಸಕ್ಕೆ ದುಡಿದವರಿಗೆ ಯಾವ ಪುರಸ್ಕಾರ ದೊರೆಯಬೇಕು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಹೋರಾಟದ ಮೂಲಕ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಂತಾಯಿತು. ಶಾಸ್ತ್ರೀಯ ಸ್ಥಾನಮಾನ ಉದ್ದೇಶಿಸುವ, ಈಡೇರಿಸುವ ಬಗ್ಗೆ ನಾವು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ತಿಳಿಸಿದರು. ಟಿಪ್ಪು ಜಯಂತಿ ಬಗ್ಗೆ ಪ್ರಸ್ತಾಪಿಸಿದ ಅವರು, ಬ್ರಿಟೀಷರ ವಿರುದ್ಧ ಅನೇಕರು ಹೋರಾಟ ಮಾಡಿದ್ದಾರೆ. ಬ್ರಿಟೀಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂಬುದು ಒಂದು ವಾದ. ಸ್ವಾರ್ಥಕ್ಕಾಗಿ ಹೋರಾಟ ಮಾಡಿದವರನ್ನು ಹಿಂದೂ ಧರ್ಮ ದ್ವೇಷಿ ಎಂಬುದು ಇನ್ನೊಂದು ವಾದ. ಇವೆರಡರಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ಮೊದಲು ತಿಳಿಯಬೇಕು ಎಂದು ಚಂಪಾ ಹೇಳಿದರು. ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಚಂಪಾ, ಸರ್ಕಾರದ ಆದೇಶಗಳು ಇಂಗ್ಲೀಷ್‍ನಲ್ಲಿ ಹೊರಡಿಸುತ್ತಿರುವುದು ಸ್ವಲ್ಪಮಟ್ಟಿಗೆ ನಿಜ.

ಜಾಗತಿಕರಣದಿಂದಾಗಿ ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆಯಾಗಿದೆ. ಗ್ರಾಮಾಂತರ, ತಾಲೂಕು, ಜಿಲ್ಲಾಮಟ್ಟದಲ್ಲಿ ಆಡಳಿತ ಭಾಷೆ ಕನ್ನಡವಾಗಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆ ಇದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕೆಂಬುದನ್ನು ತಂದೆ-ತಾಯಿ ನಿರ್ಧರಿಸಬೇಕೆಂದು ಆದೇಶ ಹೊರಡಿಸಿರುವುದು ಎಲ್ಲ ಭಾಷೆಗಳಿಗೂ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ಕೊನೆ ದಿನ ಠರಾವು ಹೊರಡಿಸಿ ಕೆಲವು ನಿರ್ಣಯಗಳನ್ನು ಕೈಗೊಂಡು ಮುಂದಿನ ಅಧಿವೇಶನದೊಳಗೆ ಅನುಷ್ಠಾನಕ್ಕೆ ತರಲು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ರಮೇಶ್, ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin