ಒಂಟಿ ಮಹಿಳೆಯರ ಸರ ದೋಚುತ್ತಿದ್ದ ಆಟೋ ಚಾಲಕರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

auto-crime
ಬೆಂಗಳೂರು, ನ.8- ಜೂಜಾಟ ಹಾಗೂ ಮೋಜಿನ ಜೀವನ ನಡೆಸಲು ಮುಂಜಾನೆ ವೇಳೆ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಮೂವರು ಆಟೋ ಚಾಲಕರನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿ 8.15 ಲಕ್ಷ ಬೆಲೆಯ 295 ಗ್ರಾಂ ಮಾಂಗಲ್ಯಸರ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆ.ಜೆ.ನಗರ, ಪಾದರಾಯನಪುರ ವಾಸಿ ಇಬ್ರಾಹಿಂ ಪಾಷ ಅಲಿಯಾಸ್ ಕಾಲು (27), ಆರ್.ಕೆ.ಹೆಗಡೆ ನಗರದ ಫಯಾಜ್ ಅಹಮ್ಮದ್ ಅಲಿಯಾಸ್ ಫಯಾಜ್ (25), ಗಿರಿನಗರದ ದೇವರಾಮ್ ಅಲಿಯಾಸ್ ಸುನೀಲ್(45) ಬಂಧಿತ ಆಟೋ ಚಾಲಕರು.

ಆರೋಪಿಗಳು ಕೆ.ಆರ್.ಪುರ, ಮಡಿವಾಳ, ಶಂಕರಪುರ, ಚಂದ್ರಾಲೇಔಟ್, ಯಶವಂತಪುರ, ಸುಬ್ರಹ್ಮಣ್ಯನಗರ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರಂತರವಾಗಿ ಮಹಿಳೆಯರ ಸರ ಅಪಹರಣ ಹಾಗೂ ವಾಹನ ಕಳ್ಳತನ ಮಾಡುತ್ತಿದ್ದರು. ಈ ಆರೋಪಿಗಳ ಬಂಧನದಿಂದ ಒಟ್ಟು 8 ಸರಗಳ್ಳತನ ಪ್ರಕರಣಗಳು, ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ. ಬಂಧಿತರಿಂದ 8.15 ಲಕ್ಷ ರೂ. ಬೆಲೆಯ 295 ಗ್ರಾಂ ಚಿನ್ನದ ಮಾಂಗಲ್ಯ ಸರ, ಚಿನ್ನದ ಸರಗಳು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಪುಲಕೇಶಿ ನಗರದ ಉಪವಿಭಾಗದ ಎಸಿಪಿ ಎಸ್.ರಮೇಶ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಶಿವಾಜಿನಗರ ಠಾಣೆ ಇನ್ಸ್‍ಪೆಕ್ಟರ್ ಕೆ.ನಾಗರಾಜ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Facebook Comments