ಕಪ್ಪು ಹಣ, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ : ಜಾವ್ಡೇಕರ್

ಈ ಸುದ್ದಿಯನ್ನು ಶೇರ್ ಮಾಡಿ

Prakash-Javdekar--01

ಬೆಂಗಳೂರು, ನ.8- ನೋಟು ಅಮಾನ್ಯೀಕರಣ ಮಾಡುವ ಮೂಲಕ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರೆ, ಕರಾಳ ದಿನ ಆಚರಿಸುತ್ತಿರುವ ಕಾಂಗ್ರೆಸ್ ಸಂಪೂರ್ಣ ಭ್ರಷ್ಟಾಚಾರಕ್ಕೆ ಮತ್ತು ಕಪ್ಪು ಹಣಕ್ಕೆ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸಚಿವ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ದೂರಿದರು. ಪ್ರಾಮಾಣಿಕತೆಯಿಂದ ಜೀವನ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರ ಘೋಷ ವಾಕ್ಯ. ನೋಟು ಅಮಾನ್ಯೀಕರಣದ ಬಗ್ಗೆ ದೇಶದ ಜನತೆಯಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವು ಮುಖಂಡರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಯಾರೊಬ್ಬರೂ ವದಂತಿಗಳಿಗೆ ಕಿವಿಗೊಡಬಾರದು. ಪ್ರಾಮಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾವ್ಡೇಕರ್ ಕಳೆದ ನ.8 ರಂದು ಪ್ರಧಾನಿಯವರು ನೋಟು ಅಮಾನೀಕರಣಗೊಳಿಸಿದ್ದು ಐತಿಹಾಸಿಕ ನಿರ್ಧಾರ. ದೇಶದ ಜನತೆ ಇದನ್ನು ಒಪ್ಪಿಕೊಂಡಿದ್ದರೂ ಕಾಂಗ್ರೆಸ್ ಮಾತ್ರ ಕರಾಳ ದಿನ ಆಚರಿಸುತ್ತಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇರುವ ರಾಜಕೀಯ ಸಂಸ್ಕøತಿ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಕಪ್ಪು ಹಣಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ನೈತಿಕ ಹಾಗೂ ರಾಜಕೀಯವಾಗಿ ದಿವಾಳಿಯಾಗಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಕಾಲದ ಕಾಂಗ್ರೆಸ್‍ಗೂ, ಈಗಿನ ಕಾಂಗ್ರೆಸ್‍ಗೂ ಅಜಗಜಾಂತರ ವ್ಯತ್ಯಾಸವಿದೆ. ದೇಶದ ಜನತೆ ಸಂಪೂರ್ಣವಾಗಿ ಕಾಂಗ್ರೆಸ್‍ನ್ನು ಕಡೆಗಣಿಸಿದ್ದರೂ ಎಚ್ಚೆತ್ತುಕೊಳ್ಳದಿರುವುದು ದುರಂತ ಎಂದು ಟೀಕಿಸಿದರು.ಬಿಜೆಪಿ ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಎಂದಿಗೂ ರಾಜಿಯಾಗುವುದಿಲ್ಲ. ಹಲವು ಏಳುಬೀಳುಗಳ ನಡುವೆ ನೋಟು ಅಮಾನ್ಯೀಕರಣ ಯಶಸ್ವಿಯಾಗಿದೆ. ಕಾಂಗ್ರೆಸ್ ಇದನ್ನು ಸಹಿಸದೆ ಆಧಾರ ರಹಿತ ಆರೋಪ ಮಾಡುತ್ತಿದೆ. ದೇಶದ ಜನತೆ ಇವರ ಸುಳ್ಳು ಆರೋಪವನ್ನು ನಂಬುವಷ್ಟು ಮೂರ್ಖರಲ್ಲ ಎಂದು ಕಿಡಿಕಾರಿದರು.

ನೈತಿಕತೆ ಇಲ್ಲ:

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‍ಗೆ ಮಾತನಾಡುವ ನೈತಿಕತೆ ಇಲ್ಲ. ಯುಪಿಎ ಅವಧಿಯಲ್ಲಿ 2ಜಿ, ಕಲ್ಲಿದ್ದಲು, ಪಿಡಬ್ಲ್ಯುಜಿ ಸೇರಿದಂತೆ ಸಾಲು ಸಾಲು ಹಗರಣಗಳು ನಡೆದವು. ಮಾಜಿ ಪ್ರಧಾನಿ ಮನ್‍ಮೋಹನ್‍ಸಿಂಗ್ ಅವರು ಕಲ್ಲಿದ್ದಲು ಖಾತೆ ಸಚಿವರಾಗಿದ್ದಾಗಲೇ ಹಿಂದೆಂದೂ ಕಾಣದಷ್ಟು ಕಲ್ಲಿದ್ದಲು ಹಗರಣ ನಡೆದಿದೆ. ಇಂಥವರು ಈಗ ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಹಲವು ಸುಧಾರಣೆ:

ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಮಹತ್ವದ ಬದಲಾವಣೆಯಾಗಿದೆ. 1200 ಕೋಟಿ ರೂ. ಮೊತ್ತದ 400 ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. 37 ಸಾವಿರ ಶೆಲ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಹೊಸದಾಗಿ 23 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ 65 ಸಾವಿರ ಕೋಟಿ ಹಣ ಜಮಾ ಮಾಡಲಾಗಿದೆ. ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಿದ ಆರೋಪದಡಿ 37 ಸಾವಿರ ಶೆಲ್ ಕಂಪೆನಿಗಳನ್ನು ಪತ್ತೆ ಮಾಡಲಾಗಿದ್ದು, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಇಎಸ್‍ಐ ಮತ್ತು ಪಿಎಫ್ ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಒಂದು ಕೋಟಿಗೂ ಹೆಚ್ಚು ಪಿಎಫ್ ಹೊಸ ಖಾತೆ ತೆರೆಯಲಾಗಿದೆ. 12 ಮಿಲಿಯನ್ ಇಎಸ್‍ಐ ಹೊಸ ಖಾತೆಗಳನ್ನು ಪ್ರಾರಂಭಿಸಲಾಗಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳು, ಆರ್‍ಟಿಜಿಎಸ್ ಮೂಲಕ ವಹಿವಾಟು ನಡೆಸುತ್ತಿರುವುದರಿಂದ ಪಾರದರ್ಶಕತೆ ಕಾಪಾಡಲಾಗಿದೆ ಎಂದರು.

ಡಿಜಿಟಲೀಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ಬಜೆಟ್‍ನಲ್ಲಿ ಇದಕ್ಕೆ ವಿಧಿಸುತ್ತಿರುವ ಕಂದಾಯ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಿಎಸ್‍ಟಿಯನ್ನು ಎಲ್ಲಾ ರಾಜ್ಯಗಳು ಹಾಗೂ ಕಾಂಗ್ರೆಸ್ ಅವಧಿಯಲ್ಲಿದ್ದ ಆರು ಮಂದಿ ಹಣಕಾಸು ಸಚಿವರು ಅವಿರೋಧವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈಗ ಯಾವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರು ಹೇಳಿದಂತೆ 100ರೂ.ನಲ್ಲಿ ಕೇವಲ 15 ರೂ. ಮಾತ್ರ ಫಲಾನುಭವಿಗಳಿಗೆ ತಲುಪುತ್ತದೆ.

ಇನ್ನುಳಿದ 85 ರೂ. ಎಲ್ಲಿಗೆ ಹೋಗಿದೆ ಎಂದರೆ ಅದು ಕಾಂಗ್ರೆಸ್‍ಗೆ ಸೇರಿರಬಹುದೆಂದು ಕುಹಕವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಸುರೇಶ್‍ಕುಮಾರ್, ಶಾಸಕರಾದ ಅಶ್ವತ್ಥನಾರಾಯಣ, ವೈ.ಎ.ನಾರಾಯಣಸ್ವಾಮಿ, ಪಕ್ಷದ ವಕ್ತಾರ ವಾಮನಾ ಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin