ಚಲಿಸುವ ವಾಹನಗಳಿಗೆ ಡಿಕ್ಕಿ ಹೊಡೆದು ಹಣ ಪೀಕುತ್ತಿದ್ದ ಇಬ್ಬರ ಖದೀಮರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದ್ರರ್ಭಿಕ ಚಿತ್ರ
ಸಾಂದ್ರರ್ಭಿಕ ಚಿತ್ರ

ಮೈಸೂರು, ನ.8-ಚಲಿಸುತ್ತಿದ್ದ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ನಮ್ಮ ವಾಹನ ಹಾಳಾಗಿದೆ ಹಣ ನೀಡಿ ಎಂದು ಜಗಳ ತೆಗೆದು ಅವರ ಬಳಿ ಇದ್ದ ನಗ ನಾಣ್ಯ ದೋಚುತ್ತಿದ್ದ ಇಬ್ಬರು ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಜಬೀಲ್ ಬಂಧಿತ ಆರೋಪಿಯಲ್ಲಿ ಒಬ್ಬನಾಗಿದ್ದು, ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ. ನಿನ್ನೆ ಬೆಳಗ್ಗೆ ಇಂಡಿಯನ್ ಆಯಿಲ್ ಮ್ಯಾನೇಜರ್ ಗಣೇಶ್ ಎಂಬುವರು ತಮ್ಮ ವಾಹನದಲ್ಲಿ ಹೋಗುತ್ತಿದ್ದಾಗ ಕುವೆಂಪು ನಗರದ ಜಯಮ್ಮ-ಗೋವಿಂದೇಗೌಡ ಛತ್ರದ ಬಳಿ ವಾಹನಕ್ಕೆ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ಗುದ್ದಿದ್ದಾರೆ. ಈವೇಳೆ ನಮ್ಮ ವಾಹನ ಹಾಳಾಗಿದೆ. ವಾಹನ ರಿಪೇರಿಗೆ 20 ಸಾವಿರ ಹಣ ನೀಡುವಂತೆ ಗಣೇಶ್ ಅವರನ್ನು ಒತ್ತಾಯಿಸಿ ಅವರ ಜೊತೆ ಜಗಳವಾಡಿ ಅವರು ಧರಿಸಿದ್ದ 20 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಿನ್ನೆ ಮಧ್ಯಾಹ್ನ ಕುವೆಂಪು ನಗರದ ಎ ಟು ಝಡ್ ಬಳಿ ವಿಶ್ವನಾಥ್ ಎಂಬುವರು ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಹಿಂಬದಿಯಿಂದ ಅವರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಡ್ಯಾಮೇಜ್ ಆಗಿದೆ ಹಣ ನೀಡಿ ಎಂದು ಪೀಡಿಸುತ್ತಿದ್ದಾಗ, ಅಲ್ಲಿದ್ದ ಸಾರ್ವಜನಿಕರು ಇವರ ಮೇಲೆ ಅನುಮಾನಗೊಂಡು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ವಾಹನ ಚಾಲಕರನ್ನು ವಂಚಿಸಿ ಹಣ ದೋಚುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ. ಈ ರೀತಿ ವಂಚನೆಗೊಳಗಾದವರು ಯಾರಾದರೂ ಇದ್ದಲ್ಲಿ ಅಶೋಕಪುರಂ ಹಾಗೂ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಶೋಕಪುರಂ ಇನ್ಸ್‍ಪೆಕ್ಟರ್ ಸಿದ್ದರಾಜು ತಿಳಿಸಿದ್ದಾರೆ.

Facebook Comments

Sri Raghav

Admin