ಡಿಜಿಟಲ್ ಪರಿವರ್ತನೆ ತಂತ್ರಜ್ಞಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಹಿಂದಿಕ್ಕಿ ನಂ.1ಸ್ಥಾನಕ್ಕೇರಿದ ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Digital--01

ಬೆಂಗಳೂರು, ನ.8-ಸಿಲಿಕಾನ್ ಸಿಟಿ, ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂಬಿತ್ಯಾದಿ ವಿಶ್ವ ಮಾನ್ಯತೆಗೆ ಪಾತ್ರವಾಗಿರುವ ಉದ್ಯಾನನಗರಿ ಬೆಂಗಳೂರು ಹಿರಿಮೆಗೆ ಈಗ ಮತ್ತೊಂದು ಗರಿ ಲಭಿಸಿದೆ. ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜಗತ್ತಿನ 45 ಮಹಾನಗರಗಳಲ್ಲಿ ಬೆಂಗಳೂರು ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿದೆ. ಅಲ್ಲದೇ ಮುಂಚೂಣಿ ನಗರ ಅಮೆರಿಕ ಸ್ಯಾನ್‍ಫ್ರಾನ್ಸಿಸ್ಕೋವನ್ನೂ ಹಿಂದಿಕ್ಕಿದೆ.  ಬೆಂಗಳೂರು ನಗರ ಜನತೆ ಅದರಲ್ಲೂ ಉದ್ಯಮದ ಮಂದಿ ಡಿಜಿಟಲ್ ತಂತ್ರಜ್ಞಾನದಲ್ಲಿ ಅಧಿಕ ವಿಶ್ವಾಸ ಮತ್ತು ನಂಬಿಕೆ ಹೊಂದಿದ್ದಾರೆ. ಈ ವಿಷಯದಲ್ಲಿ ಬೆಂಗಳೂರಿಗರು ಸ್ಯಾನ್ ಫ್ರಾನ್ಸಿಸ್ಕೋಗಿಂತ ಮುಂದಿದ್ದಾರೆ.

ಕೌಶಲ್ಯಗಳು, ಆರ್ಥಿಕ ಪರಿಸರ, ಅನ್ವೇಷಣೆ ಮತ್ತು ಉದ್ಯಮಶೀಲತೆ, ನವೀನ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಮೂಲಸೌಕರ್ಯಾಭಿವೃದ್ದಿ ಮೊದಲಾದ ಕ್ಷೇತ್ರಗಳ ಆಧಾರದ ಡಿಜಿಟಲ್ ಪರಿಸರದಲ್ಲಿ ಬೆಂಗಳೂರಿಗರು ಅಪಾರ ವಿಶ್ವಾಸ ಹೊಂದಿದ್ದು, ಅವುಗಳನ್ನು ಅನುಷ್ಠಾನಗೊಂಡು ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಗೋ ಡಿಜಿಟಲ್ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಆರ್ಥಿಕ ಬುದ್ದಿಮತ್ತೆ ಘಟಕ(ಇಐಯು) ವರದಿ ಹೇಳಿದೆ.  ಭಾರತದ ನಗರಗಳು ಮೂಲಸೌಕರ್ಯ ಕೊರತೆಗಳು, ಪರಿಸರ ಮಾಲಿನ್ಯ, ಬಡತನ ಮತ್ತು ಇತರ ಪಿಡುಗುಗಳಿಂದ ನರಳುತ್ತಿರಬಹುದು. ಆದರೆ ಡಿಜಿಟಲ್ ಪರಿವರ್ತನೆ ವಿಷಯಕ್ಕೆ ಬಂದಾಗ ಬೆಂಗಳೂರಿನ ಜನತೆ ಮತ್ತು ವಾಣಿಜ್ಯ ಮುಖಂಡರು ಗೋ ಡಿಜಿಟಲ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಡೆನಿಸ್ ಮ್ಯಾಕೌಲೇ ನೇತೃತ್ವದ ತಂಡವೊಂದರ ವಿಶ್ಲೇಷಕರು ವರದಿಯಲ್ಲಿ ತಿಳಿಸಿದ್ದಾರೆ.

ವಿಶ್ವದ 45 ಪ್ರಮುಖ ನಗರಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವುಗಳಲ್ಲಿ ಡಿಜಿಟಲ್ ಪರಿವರ್ತನೆ ಮತ್ತು ಆ ತಂತ್ರಜ್ಞಾನ ಆಳವಡಿಸಿಕೊಳ್ಳುವುದರಲ್ಲಿ ಬೆಂಗಳೂರು ಮುಂದಿದೆ. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ಇತರ ನಗರಗಳಿಗೆ ಹೋಲಿಸಿದರೆ ಗಾರ್ಡನ್ ಸಿಟಿಯದ್ದು ಗಮನಾರ್ಹ ಸಾಧನೆ ಎಂದು ಅವರು ವಿಶ್ಲೇಷಿಸಿದ್ದಾರೆ.  ಮೊದಲ ಸ್ಥಾನದಲ್ಲಿ ಬೆಂಗಳೂರು ಇದ್ದರೆ, ಸ್ಯಾನ್ ಫ್ರಾನ್ಸಿಸ್ಕೋಗೆ ಎರಡನೇ ಶ್ರೇಣಿ, ಮುಂಬೈ ಮತ್ತು ನವದೆಹಲಿ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದಿವೆ. ಟೋಕಿಯೊ, ಯೊಕೊಹಾಮಾ ಮತ್ತು ಬರ್ಲಿನ್ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಡಿಜಟಲ್ ಭದ್ರತೆಯಲ್ಲಿನ ಕೌಶಲ್ಯಗಳು, ದೊಡ್ಡ ದತ್ತಾಂಶ ವಿಶ್ಲೇಷಣೆಗಳತ್ತ ಬೆಂಗಳೂರಿನ ವಾಣಿಜೋದ್ಯಮಿಗಳು ಆಸಕ್ತರಾಗಿದ್ದಾರೆ. ಅಲ್ಲದೇ ಕ್ಲೌಡ್ ಕಂಪ್ಯೂಟಿಂಗ್ ಕೌಶಲಗಳು, ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆ ಬಗ್ಗೆ ಬೆಂಗಳೂರಿಗರು ಅಪಾರ ಆಸಕ್ತಿ ಹೊಂದಿದ್ದು. ಇವುಗಳನ್ನು ತಮ್ಮ ದಿನನಿತ್ಯದ ವ್ಯವಹಾರಗಳಿಗೆ ವ್ಯಾಪಕವಾಗಿ ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇದಕ್ಕಾಗಿ ಏಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಮತ್ತು ಯೂರೋಪ್‍ನ ಕಂಪನಿಗಳನ್ನು ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಶೇ.48 ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಡಿಜಿಟಲ್‍ನಿಂದ ಅನುಕೂಲಕರವಾಗುವ ಮತ್ತಷ್ಟು ಹೆಚ್ಚು ಪೂರಕ ಪರಿಸರದ ಪ್ರಯೋಜನಗಳನ್ನು ಪಡೆಯಲು ಉತ್ಸುಕವಾಗಿರುವುದಾಗಿ ಈ ಎಲ್ಲ ಸಂಸ್ಥೆಗಳು ತಿಳಿಸಿವೆ. ಗೋ ಡಿಜಿಟಲ್ ಪರಿವರ್ತನೆ ಸ್ಥಿತಿ-ಗತಿಗಳನ್ನು ತಿಳಿಯಲು ನಡೆದ ಈ ಸಮೀಕ್ಷೆಯ ಅಂಗವಾಗಿ ಕಳೆದ ಜೂನ್ ಮತ್ತು ಜುಲೈನಲ್ಲಿ 45 ನಗರಗಳ 2,620 ಖಾಸಗಿ ವಲಯದ ಅಧಿಕಾರಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಯಿತು.

Facebook Comments

Sri Raghav

Admin