ದೇಶಾದ್ಯಂತ ನೋಟ್ ಬ್ಯಾನ್ ಪರ-ವಿರೋಧಿ ಕೂಗು

ಈ ಸುದ್ದಿಯನ್ನು ಶೇರ್ ಮಾಡಿ

Rahul--02

ನವದೆಹಲಿ, ನ.8- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ವಿರೋಧ ಪಕ್ಷಗಳು ಇಂದು ದೇಶಾದ್ಯಂತ ಪರ-ವಿರೋಧಿ ದಿನ ಆಚರಿಸಿದವು. ಸತ್ತ ನೋಟಿನ ನೆರಳಲ್ಲಿ ಕೈ-ಕಮಲದ ನಡುವಣ ಕತ್ತಿ ಮಸೆತ ಎಂದು ಇದನ್ನು ಬಣ್ಣಿಸಲಾಗುತ್ತಿದೆ. ಮೋದಿ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ ನೋಟು ನಿಷೇಧ ಅತಿ ದೊಡ್ಡ ಸಾಧನೆ ಎಂದು ವರ್ಣಿಸಿರುವ ಬಿಜೆಪಿ ಈ ದಿನವನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ನೋಟು ನಿಷೇಧ ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತ್ತು ಕೆಲ ಪಕ್ಷಗಳು ಕರಾಳ ದಿನವನ್ನಾಗಿ ಆಚರಿಸಿ ಪ್ರತಿಭಟನೆ ನಡೆಸುತ್ತಿವೆ.

ರಾಜಧಾನಿ ನವದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಉತ್ತರ ಭಾರತ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲೂ ಇಂದು ಬಿಜೆಪಿ ಮತ್ತು ವಿರೋಧ ಪಕ್ಷಗಳು ಪರ-ವಿರೋಧಿ ಪ್ರದರ್ಶನಗಳನ್ನು ನಡೆಸಿವೆ. ಗುಜರಾತ್‍ನ ಸೂರತ್‍ನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಇಂದು ಪಾಲ್ಗೊಂಡರು. ಕರಾಳ ದಿನದ ಅಂಗವಾಗಿ ಮೇಣದ ಬತ್ತಿ ಹಚ್ಚಿ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳದ ರೀತಿಯಲ್ಲಿ ಹಾನಿಗೀಡಾಗಿದೆ. ಸಣ್ಣ ವ್ಯಾಪಾರಿಗಳು ಇದರಿಂದ ಭಾರೀ ತೊಂದರೆಗೊಳಗಾಗಿದ್ದು, ವ್ಯಾಪಾರ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದೊಂದು ದುರಂತ, ಪ್ರಧಾನಿಯವರ ವಿವೇಚನಾರಹಿತ ನಿರ್ಧಾರ ಎಂದು ಮೋದಿ ವಿರುದ್ಧ ಹರಿಹಾಯ್ದರು.

ನೋಟು ಅಮಾನ್ಯೀಕರಣದ ವಿರುದ್ಧ ಆರಂಭದಿಂದಲೂ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಡಿಮಾನಿಟೈಸೇಷನ್‍ಅನ್ನು ಡೆಮೋಡಿಸಾಸ್ಟರ್ ಎಂದು ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು, ನೋಟು ಅಮಾನೀಕರಣದ ವರ್ಷಾಚರಣೆ ಅಂಗವಾಗಿ ಟ್ವೀಟರ್‍ನಲ್ಲಿದ್ದ ತಮ್ಮ ಚಿತ್ರವನ್ನು ಮರೆಮಾಚಿ ಪ್ರತಿಭಟನೆ ಸಲ್ಲಿಸಿದ್ದಾರೆ. ನೋಟು ಅಮಾನ್ಯೀಕರಣದ ವರ್ಷಾಚರಣೆಯಂದು ಸಾಮಾಜಿಕ ಜಾಲತಾಣದ ಎಲ್ಲ ಬಳಕೆದಾರರು ತಮ್ಮ ಚಿತ್ರಗಳನ್ನು ಕಪ್ಪು ಪಟ್ಟಿಯಿಂದ ಮರೆಮಾಚಿ ಪ್ರತಿಭಟನೆ ಸಲ್ಲಿಸುವಂತೆ ಮೊನ್ನೆ ತಾನೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು.

ಕರಾಳ ದಿನಾಚರಣೆ ಅಂಗವಾಗಿ ಸ್ವತಃ ತಮ್ಮ ಟ್ವೀಟರ್‍ನಲ್ಲಿದ್ದ ಚಿತ್ರವನ್ನು ಮರೆಮಾಚಿರುವ ಅವರು ಇದು ಡಿಮಾನಿಟೈಸೇಷನ್ ಅಲ್ಲ, ಡೆಮೋಡಿಸಾಸ್ಟರ್ (ಘೋರ ದುರಂತ) ಎಂದು ಬಣ್ಣಿಸಿದ್ದಾರೆ.  ಕರಾಳ ದಿನವಾದ ಇಂದು ಈ ಬಗ್ಗೆ ಹೋರಾಟ ನಡೆಸುತ್ತಿರುವ ಎಲ್ಲ ಪಕ್ಷಗಳಿಗೆ ತಾವು ಬೆಂಬಲ ಸೂಚಿಸುವುದಾಗಿ ಹೇಳಿದರು. ಮಹಾರಾಷ್ಟ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಧುರೀಣ ಪೃಥ್ವಿರಾಜ್ ಚೌಹಾಣ್, ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಹಿಂದಿರುವ ವಾಸ್ತವ, ಉದ್ದೇಶ ತಿಳಿಯಲು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿ ಕೈಗೊಂಡ ನಿರ್ಧಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ಬಡವರು ಮತ್ತು ಮಧ್ಯಮ ವರ್ಗದ ಜನಜೀವನ ಅತಂತ್ರಗೊಂಡಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಯಾವ ಉದ್ದೇಶದಿಂದ ಈ ದುಡುಕಿನ ನಿರ್ಧಾರ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ವಾಸ್ತವ ಸಂಗತಿ ಅರಿಯಲು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಹಾಗೂ ದೇಶದಲ್ಲಿನ ಡಿಜಿಟಲ್ ಪಾವತಿ ಕಂಪೆನಿಗಳಿಗಾಗಿ ಸೂಕ್ತ ನಿಯಂತ್ರಣ ವ್ಯವಸ್ಥೆಯೊಂದನ್ನು ಜಾರಿಗೊಳಿಸಬೇಕು ಎಂದು ಆಗ್ರಹ ಪಡಿಸಿದರು.

ಕಾಂಗ್ರೆಸ್ ಧುರೀಣ ಮತ್ತು ಮಾಜಿ ಸಚಿವ ಪಿ.ಚಿದಂಬರಂ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿ, ನೋಟು ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಲ್ಲದೆ, ಅನೇಕರನ್ನು ಇದು ಬಲಿ ತೆಗೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.  ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಲಖನೌ, ಅಹಮದಾಬಾದ್, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಕಾರ್ಯಕರ್ತರು ಕರಾಳ ದಿನದ ಅಂಗವಾಗಿ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.  ಇಂದು ಆಚರಿಸಲಾಗುತ್ತಿರುವ ಕರಾಳ ದಿನಕ್ಕೆ ಮುನ್ನವೇ ನಿನ್ನೆಯಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೋಟು ಅಮಾನ್ಯ ವಿಷಯ ಕುರಿತ ಸಮರ್ಥನೆ ಮತ್ತು ಖಂಡನೆಗಳು ವ್ಯಕ್ತವಾಗುತ್ತಿವೆ.

ನೋಟು ಅಮಾನ್ಯೀಕರಣ ಐತಿಹಾಸಿಕ ನಿರ್ಧಾರ. ನಾವು ದಿಟ್ಟ ನಿರ್ಧಾರ ಕೈಗೊಂಡು ಸರಿಯಾದ ದಿಕ್ಕಿನಲ್ಲಿ ಸಾಗಿದ್ದೇವೆ. ಇದರಿಂದ ದೇಶದ 125 ಕೋಟಿ ಜನರಿಗೆ ಪ್ರಯೋಜನವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರೆ, ಕೇಂದ್ರ ಸರ್ಕಾರದ ನೀತಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಇದೊಂದು ಸಂಘಟಿತ ಲೂಟಿ ಎಂದು ಕಟುವಾಗಿ ಟೀಕಿಸಿದರು.

Facebook Comments

Sri Raghav

Admin