ನೋಟು ಬ್ಯಾನ್ ಇಂದಿಗೆ ಒಂದು ವರ್ಷ : ಹೇಗಿತ್ತು ಮೋದಿ ಅಂದು ಕೊಟ್ಟ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Modi--001

ನವದೆಹಲಿ, ನ.8-ಕಾಳದಂಧೆಕೋರರು, ಉಗ್ರರು, ತೆರಿಗೆ ವಂಚಕರು ಸೇರಿದಂತೆ ಮತ್ತಿತರ ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದ ಐತಿಹಾಸಿಕ ನೋಟು ಅಮಾನೀಕರಣ ಜಾರಿಯಾಗಿ ಒಂದು ವರ್ಷ ಸಂದಿದೆ.
ದೇಶಾದ್ಯಂತ ರಾತ್ರೋರಾತ್ರಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಧಾನಿಯವರ ಈ ತೀರ್ಮಾನ ಒಂದು ವರ್ಷದ ನಂತರ ಹಲವು ಏಳುಬೀಳುಗಳನ್ನು ಕಂಡಿದೆ. ನೋಟು ಅಮಾನೀಕರಣ ಯಶಸ್ವಿಯಾಗಿದೆ ಎಂದು ಆಡಳಿತರೂಢ ಸರ್ಕಾರ ಹೇಳುತ್ತಿದೆಯಾದರೂ, ಆದರೆ ಪ್ರತಿಪಕ್ಷಗಳು ಮಾತ್ರ ಈ ಬಗ್ಗೆ ಟೀಕಿಸುವುದನ್ನು ಈವರೆಗೂ ನಿಲ್ಲಿಸಿಲ್ಲ.

ಇಂದಿಗೆ ನೋಟು ಅಮಾನೀಕರಣವಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭ್ರಷ್ಟರ ವಿರೋಧಿ ದಿನಾಚರಣೆ ಆಚರಿಸುತ್ತಿದ್ದರೆ, ಪ್ರತಿಪಕ್ಷಗಳು ಕರಾಳ ದಿನಾಚರಣೆಗೆ ಕರೆ ನೀಡಿವೆ. ಜಿಡಿಪಿ ಕುಸಿತ, ಉದ್ಯೋಗ ಕಡಿತ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ನೋಟು ಅಮಾನೀಕರಣ ಒಂದಿಷ್ಟು ಅನುಕೂಲ ಮತ್ತು ಅನಾನುಕೂಲವನ್ನು ಸೃಷ್ಟಿಸಿದ್ದು ಸುಳ್ಳಲ್ಲ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಗೆ ಕೇಂದ್ರ ಸರ್ಕಾರ ಕಳೆದ ನ.8 ರಂದು ನಿಷೇಧ ಹೇರಿದ್ದು, ದೇಶದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು.

ಸದ್ದಿಲ್ಲದ ಕಾರ್ಯಾಚರಣೆ:

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಳೆ 500-1000 ಮುಖಬೆಲೆಯ ನೋಟುಗಳ ನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ತಿಂಗಳ ಕಾಲ ಮಾಹಿತಿ ಗುಟ್ಟಾಗಿ ಇಡಲಾಗಿತ್ತಂತೆ. ಸಂಪುಟ ಸದಸ್ಯರ ಪಾಲಿಗೂ ಗುಟ್ಟಾಗಿದ್ದ ಈ ನಿರ್ಧಾರ, ಮೋದಿ ಅವರನ್ನು ಹೊರತು ಪಡಿಸಿದರೆ ಇತರ ಆರು ಮಂದಿಗೆ ಮಾತ್ರ ಗೊತ್ತಿತ್ತು. ಮೋದಿ ಅವರಿಂದ ನೇಮಕಗೊಂಡ ಆರು ಮಂದಿಯ ತಂಡ ನ. 8ರ ಮಹತ್ವದ ನಿರ್ಧಾರಕ್ಕೂ ಮುನ್ನ ಹಲವು ತಿಂಗಳಿಂದಲೂ ಹಗಲಿರುಳು ಸಂಶೋಧನೆ ನಡೆಸಿತ್ತು.

ವಿಶ್ವಾಸಾರ್ಹ ಅಧಿಕಾರಿಗಳ ತಂಡ:

ಪ್ರಧಾನಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಮತ್ತು ವಿಶ್ವಾಸರ್ಹತೆ, ಪ್ರಾಮಾಣಿಕತೆಗೆ ಹೆಸರಾದ ಹಸ್ ಮುಖ್ ಅಧಿಯಾ ಎಂಬ ಹಣಕಾಸು ಇಲಾಖೆ ಅಧಿಕಾರಿಯೊಂದಿಗೆ ಮೋದಿ ಅವರು ನೋಟು ನಿಷೇಧ ನಿರ್ಧಾರವನ್ನು ಹಂಚಿಕೊಂಡಿದ್ದರಂತೆ. ಅಷ್ಟೆ ಪ್ರಮಾಣಿಕರೆನಿಸಿದ ಇತರ ಐವರು ಅಧಿಕಾರಿಗಳನ್ನು ಆಯ್ಕೆ ಮಾಡಿ, ಅಧಿಯಾ ನೇತೃತ್ವದಲ್ಲಿ ನೋಟು ನಿಷೇಧ ಕುರಿತ ಸಂಶೋಧನೆಗೆ ತಂಡವನ್ನು ರಚಿಸಿದ್ದರು.

ಪ್ರಧಾನಿ ನಿವಾಸದಲ್ಲೆ ಕೆಲಸ:

ಯೋಜನೆಯ ಗೌಪ್ಯತೆಯನ್ನು ಎಷ್ಟರ ಮಟ್ಟಿಗೆ ಕಾಯ್ದು ಕೊಳ್ಳಲಾಗಿತ್ತೆಂದರೆ ಆರು ಜನರ ಸಂಶೋಧಕರ ತಂಡ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪ್ರಧಾನಿ ಅವರ ನಿವಾಸದ ಎರಡು ಕೊಠಡಿಗಳಿಂದಲೇ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿತ್ತು. ನೋಟು ನಿಷೇಧದ ನಿರ್ಧಾರವನ್ನು ಘೋಷಣೆ ಮಾಡುತ್ತಿದ್ದಂತೆಯೇ ಕಪ್ಪುಹಣ ಹೊಂದಿರುವವರು ಅದನ್ನು ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡಲಿದ್ದಾರೆ ಎಂದು ತಂಡ ಮೊದಲೇ ಊಹೆ ಮಾಡಿತ್ತು.  ಯೋಜನೆಯ ಜಾರಿಯಲ್ಲಿ ಸ್ವಲ್ಪ ಲೋಪಗಳು ನಡೆದಿದ್ದರೂ ಅನಾಹುತ ನಡೆಯುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿಯಾಗ ಬಹುದಾದ ನಿರ್ಧಾರವನ್ನು ತೆಗೆದುಕೊಂಡಿದ್ದ ಮೋದಿ, ಅಧಿಯಾ ನೇತೃತ್ವದ ತಂಡದ ಮೇಲೆ ನಂಬಿಕೆ ಇಟ್ಟು ತಮ್ಮ ಜನಪ್ರಿಯತೆ ಹಾಗೂ ಗೌರವಗಳನ್ನು ಪಣಕ್ಕಿಟ್ಟು ನೋಟು ನಿಷೇಧದ ನಿರ್ಧಾರವನ್ನು ಅಂತಿಮಗೊಳಿಸಿದ್ದರು.

ಹೊಣೆ ಹೊರುವ ಭರವಸೆ ನೀಡಿದ ಮೋದಿ:

ಇದೇ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟದಲ್ಲೂ ಪ್ರಕಟಿಸಿದ್ದ ಪ್ರಧಾನಿ ಮೋದಿ, ತಾವು ಸಾಕಷ್ಟು ಸಂಶೋಧನೆ ನಡೆಸಿರುವುದಾಗಿಯೂ ಮತ್ತು ಒಂದು ವೇಳೆ ಅದು ವಿಫಲಗೊಂಡರೆ ಅದರ ಹೊಣೆಯನ್ನು ತಾವೇ ಹೊರುವುದಾಗಿಯೂ ಪ್ರಕಟಿಸಿದ್ದರಂತೆ.
ಈ ವಿಷಯವು ಸೋರಿಕೆಯಾದರೆ, ಇಡೀ ಪ್ರಕ್ರಿಯೆ ಅರ್ಥಹೀನವಾಗುತ್ತದೆ ಎಂಬ ಆತಂಕವಿತ್ತು. ಹೀಗಾಗಿಯೇ ಅತ್ಯಂತ ಗೌಪ್ಯವಾಗಿಡಲಾಗಿತ್ತು. ಅಲ್ಲದೆ, ನಮ್ಮ ಸಂಶೋಧನೆ ಕುರಿತಾಗಿ ಇತರರಿಗೆ ಅನುಮಾನ ಬಾರದಿರಲೆದೆಂದು ವಿಷಯವಸ್ತುಗಳನ್ನು ತುಂಡು ತುಂಡಾಗಿ ವಿಂಗಡಿಸಲಾಗಿತ್ತು.

ಅಮಿತ್ ಶಾಗೂ ಗೊತ್ತಿರಲಿಲ್ಲ :

ದೇಶದಲ್ಲಿ ಏಕಾಏಕಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರಡಿಸಿರುವ ನೋಟ್ ಬ್ಯಾನ್ ನಿರ್ಧಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಇರಲಿಲ್ವಂತೆ. ಇದಕ್ಕೆ ಸಂಬಂಧಿಸಿದಂತೆ ಅಲ್ಪಸ್ವಲ್ಪ ಮಾಹಿತಿ ಗೊತ್ತಿದ್ದರೂ ಏನು ಎಂಬ ಸ್ಪಷ್ಟ ಮಾಹಿತಿ ಅವರ ಬಳಿ ಇರಲಿಲ್ಲ. ನೋಟ್ ಬ್ಯಾನ್ ನಿರ್ಧಾರ ಪ್ರಕಟಿಸುವುದಕ್ಕೂ 5 ಗಂಟೆ ಮೊದಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ನಿರ್ಧಾರದ ಕುರಿತು ತಿಳಿಸಿದ್ದರು.

ಅಸ್ಪಷ್ಟ ಸುಳಿವು ಸಿಕ್ಕಿತ್ತಾದರೂ…:

ಹೊಸ ಸರಣಿಯ ನೋಟುಗಳಿಗೆ ಸಿದ್ಧತೆ ಬಗ್ಗೆ ಮೇ ತಿಂಗಳಲ್ಲಿ ಆರ್‍ಬಿಐ ಮಾಹಿತಿ ಬಹಿರಂಗಪಡಿಸಿದ ನಂತರ ವಿಶ್ಲೇಷಕರಿಗೆ ನೋಟು ನಿಷೇಧದಂತಹ ಕ್ರಮ ಜಾರಿಯಾಗುವ ಸಾಧ್ಯತೆ ಬಗ್ಗೆ ಸಣ್ಣ ಸುಳಿವು ಇತ್ತೆಂದು ಹೇಳಲಾಗುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಹೊಸ 2,000 ರೂ. ನೋಟು ವಿನ್ಯಾಸಕ್ಕೆ ಆರ್‍ಬಿಐ ಅನುಮೋದನೆ ನೀಡಿದ ಬಳಿಕ ನೋಟು ನಿಷೇಧದ ಸಾಧ್ಯತೆಗೆಳು ಮತ್ತಷ್ಟು ನಿಚ್ಚಳವಾಗಿತ್ತು. ಅಕ್ಟೊಬರ್ ಅಂತ್ಯದ ವೇಳೆಗೆ ಹೊಸ 2,000 ರೂ. ನೋಟುಗಳ ಮುದ್ರಣ ಆರಂಭವಾಗಿತ್ತು.

ಯಾರು ಅಧಿಯಾ?:

58ರ ಹರೆಯದ ಅಧಿಯಾ ಅವರು 1981 ಬ್ಯಾಚ್ ಐಎಎಸ್ ಅಧಿಕಾರಿ. ಗುಜರಾತ್ ಮೂಲದ ಇವರು, 2003-06ರ ಅವಧಿಯಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ದ್ದರು. 2015ರಲ್ಲಿ ಅಧಿಯಾ ಅವರನ್ನು ಕಂದಾಯ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.

Facebook Comments

Sri Raghav

Admin