ನೋಟ್ ಬ್ಯಾನ್ ಬಡವರ ಮೇಲೆ ಮಾಡಿದ ಸರ್ಜಿಕಲ್ ಸ್ಟ್ರೈಕ್

ಈ ಸುದ್ದಿಯನ್ನು ಶೇರ್ ಮಾಡಿ

Congrewsss

ಬೆಂಗಳೂರು,ನ.8-ನೋಟು ನಿಷೇಧದಿಂದ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗದೆಯೇ ಹೊರತು ಕಾಳಧನಿಕರಿಗೆ, ದಂಧೆಕೋರರಿಗೆ ಯಾವುದೇ ತೊಂದರೆಗಳಾಗಿಲ್ಲ ಎಂದು ಹೇಳಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು, ಈ ಕ್ರಮ ಬಡಜನರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಗಿದ್ದು , ಈ ಕುರಿತಂತೆ ಮುಕ್ತ ಚರ್ಚೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದರು. ನೋಟ್ ಬ್ಯಾನ್‍ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಫ್ರೀಡಂಪಾರ್ಕ್‍ನಲ್ಲಿ ಆಯೋಜಿಸಿದ್ದ ಕರಾಳ ದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ವಿರೋಧ ಪಕ್ಷಗಳನ್ನು ಎದುರಿಸುವ ಶಕ್ತಿ ಇಲ್ಲದೆ ಸಂಸತ್ ಅಧಿವೇಶನ ಕರೆಯಲು ಹಿಂದೇಟು ಹಾಕುತ್ತಿದೆ ಎಂದು ಆರೋಪ ಮಾಡಿದರು.

ನೋಟು ನಿಷೇಧದ ಸಂದರ್ಭ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದರೂ ಬಿಜೆಪಿಗೆ ಆ ಬಗ್ಗೆ ಕಿಂಚಿತ್ತಾದರೂ ಸಹಾನುಭೂತಿ ಇಲ್ಲ. ಪ್ರಮುಖವಾಗಿ ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದ ಜಿಡಿಪಿ ಕುಸಿದಿದೆ. 2018ರ ವಿಧಾನಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೇಂದ್ರದ ಆದೇಶದಂತೆ ಪರಿವರ್ತನಾ ಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪರಿವರ್ತನಾ ಯಾತ್ರೆಯ ಬಗ್ಗೆ ಕಿಡಿಕಾರಿದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಪರಿವರ್ತನೆ ಮಾಡಿದೆ. ಇವರು ಬಂದು ಹೊಸದಾಗಿ ಮಾಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ನೋಟು ನಿಷೇಧದ ವಿರುದ್ಧ ಕರಾಳ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಇದು ನಿರಂತರವಾಗಿ ನಡೆದು ಜನರಿಗೆ ಈ ಬಗ್ಗೆ ಉಂಟಾಗಿರುವ ತೊಂದರೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ವೇಣುಗೋಪಾಲ್ ಕಾರ್ಯಕರ್ತರಿಗೆ ಕರೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಪ್ರಗತಿ ಕುಂಠಿತವಾಗಿದೆ. ಈ ಆಡಳಿತ ಹೀಗೆ ಮುಂದುವರೆದರೆ ದೇಶದ ಪರಿಸ್ಥಿತಿ ಅಧೋಗತಿಗಿಳಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರ ಪರಿವರ್ತನಾ ಯಾತ್ರೆಯಿಂದ ಯಾವ ಉಪಯೋಗವೂ ಇಲ್ಲ. ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ಅಪ್ರಬುದ್ಧ ಪ್ರಧಾನಿಯಾಗಿದ್ದು , ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಕಾನೂನು ಉಲ್ಲಂಘಿಸಿ ನೋಟು ನಿಷೇಧ ಹೇರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋಟು ನಿಷೇಧದಿಂದ ಯಾವ ಫಲವೂ ಸಿಕ್ಕಿಲ್ಲ. ಬಿಜೆಪಿಗೆ ಪ್ರತಿ ವರ್ಷ ದೇಣಿಗೆ ರೂಪದಲ್ಲಿ ಬರುತ್ತಿರುವುದೆಲ್ಲ ಕಪ್ಪು ಹಣವೇ ಎಂದು ಆರೋಪಿಸಿದ ಉಗ್ರಪ್ಪ , ಸಂಸತ್ ಅಧಿವೇಶನ ಕರೆಯಲು ಪ್ರಧಾನಿ ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೃಷಿ ಸಚಿವ ಕೃಷ್ಣಭೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿ.ಎಲ್.ಶಂಕರ್ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಆನಂದರಾವ್ ವೃತ್ತದಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕವಿಕಾ ಅಧ್ಯಕ್ಷ ಎಸ್.ಮನೋಹರ್ ನೇತೃತ್ವದಲ್ಲಿ ನೂರಾರು ಮಂದಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿದರು.

Facebook Comments

Sri Raghav

Admin