ಪರಿವರ್ತನಾ ಯಾತ್ರೆ ಉದ್ಘಾಟನೆ ವೇಳೆ ಉಂಟಾದ ಅವ್ಯವಸ್ಥೆ ಕುರಿತು ಬಿಜೆಪಿ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

Amit--02

ಬೆಂಗಳೂರು,ನ.8-ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ಘಾಟನೆ ವೇಳೆ ಉಂಟಾದ ಅವ್ಯವಸ್ಥೆ ಮತ್ತು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಬಿಜೆಪಿ ಪಕ್ಷ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರೇ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಪ್ಪುಹಣ ವಿರೋಧಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಬಳಿಕ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

ಪರಿವರ್ತನಾ ಯಾತ್ರೆಗೆ ನಿರೀಕ್ಷಿತ ಜನ ಬಾರದೇ ಇದ್ದುದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಈ ಬಗ್ಗೆ ದಿನಕ್ಕೊಂದು ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ. ಈ ಊಹಾಪೋಹಗಳೆಲ್ಲವೂ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧವೇ ಸುತ್ತಿಕೊಳ್ಳುತ್ತಿದೆ. ಇದು ಪಕ್ಷ ಸಂಘಟನೆಗೆ ಧಕ್ಕೆ ತರಬಹುದಾದ ಹಿನ್ನೆಲೆಯಲ್ಲಿ ಜಾವಡೇಕರ್ ಅವರು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದಾರೆಂದು ತಿಳಿದುಬಂದಿದೆ.

ಗೊಂದಲಗಳ ಕುರಿತಂತೆ ಮೊದಲು ಪಕ್ಷದ ಬೆಂಗಳೂರು ಭಾಗದ ಮುಖಂಡರೊಂದಿಗೆ ಚರ್ಚಿಸಲಿರುವ ಪ್ರಕಾಶ್ ಜಾವಡೇಕರ್ ನಾಳೆ ಮಂಗಳೂರಿಗೆ ತೆರಳಿ ಅಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಂಗಳೂರಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಕುರಿತು ಕೋರ್ ಕಮಿಟಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆಂದು ಮೂಲಗಳು ಹೇಳಿವೆ.

ದಿನಕ್ಕೊಂದು ಊಹಾಪೋಹ : 

ಕಳೆದ ಗುರುವಾರ ನಡೆದ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ 17 ಜಿಲ್ಲೆ, 114 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಬೈಕ್‍ಗಳಲ್ಲಿ ಎರಡು ಲಕ್ಷ ಯುವ ಕಾರ್ಯಕರ್ತರು ಸೇರಿ ಸುಮಾರು ಮೂರು ಲಕ್ಷ ಮಂದಿ ಬರುತ್ತಾರೆಂದು ಹೇಳಲಾಗಿತ್ತು. ಆದರೆ, ಅದರ ಅರ್ಧದಷ್ಟು ಜನರೂ ಬಂದಿರಲಿಲ್ಲ. ಹೀಗಾಗಿ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಆರ್.ಅಶೋಕ್ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಆರೋಪ ಕೇಳಿಬಂದವು.

ಇದರ ಜತೆಗೆ ಅಶೋಕ್ ಅವರು ಬೆಂಗಳೂರಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಅವರಾರೂ ಸ್ಪಂದಿಸಿಲ್ಲ. ಹಣಕಾಸು ವ್ಯವಸ್ಥೆಯನ್ನು ಶೋಭಾ ಕರಂದ್ಲಾಜೆ ಅವರೇ ನೋಡಿಕೊಳ್ಳುತ್ತಿದ್ದುದರಿಂದ ಅಶೋಕ್ ಕೈ ಕಟ್ಟಿಹಾಕಲಾಗಿತ್ತು. ಕಾರ್ಯಕ್ರಮ ವಿಫ್ಲವಾಗಲು ಅಶೋಕ್ ಕಾರಣ ಎಂದು ಅವರ ವಿರುದ್ಧ ವರಿಷ್ಠರಿಗೆ ದೂರು ನೀಡಲಾಗಿದೆ.  ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ರೀತಿಯ ಗೊಂದಲ, ಊಹಾಪೋಹಗಳು ಪಕ್ಷದ ಸಂಘಟನೆಗೆ ಅಡ್ಡಿಯಾಗಬಹುದು ಎಂಬ ಆತಂಕದಿಂದ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಕಾಶ್ ಜಾವಡೇಕರ್ ಅವರಿಗೆ ವಹಿಸಿದ್ದಾರೆ.   ಹೀಗಾಗಿ ನಾಳೆ ಕೋರ್ ಕಮಿಟಿ ಸಭೆಗೆ ಮಂಗಳೂರಿಗೆ ಬರಬೇಕಾಗಿದ್ದ ಜಾವಡೇಕರ್ ಒಂದು ದಿನ ಮೊದಲೇ ಬೆಂಗಳೂರಿಗೆ ಬಂದು ಸಮಸ್ಯೆ ಕುರಿತು ಮುಖಂಡರೊಂದಿಗೆ ಸಮಾಲೋಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin