ದೆಹಲಿ ಶಾಲಾ ಬಾಲಕನ ಕೊಲೆಗೆ ಟ್ವಿಸ್ಟ್, ಪರೀಕ್ಷೆ ಮುಂದೂಡಲು 11ನೇ ತರಗತಿ ವಿದ್ಯಾರ್ಥಿಯಿಂದ ಕಗ್ಗೊಲೆ…!

ಈ ಸುದ್ದಿಯನ್ನು ಶೇರ್ ಮಾಡಿ

Boy--22

ನವದೆಹಲಿ, ನ.8-ಹರ್ಯಾಣದ ಗುರ್‍ಗಾಂವ್‍ನ(ಗುರುಗ್ರಾಮ) ರಯಾನ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಏಳು ವರ್ಷದ ಬಾಲಕನ ಭೀಕರ ಕೊಲೆ ಪ್ರಕರಣಕ್ಕೆ ಹೊಸ ತಿರುವು ದೊರತಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು 11ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಪರೀಕ್ಷೆಯನ್ನು ಮುಂದೂಡುವ ಉದ್ದೇಶದಿಂದಲೇ ಈ ಹತ್ಯೆ ನಡೆದಿದೆ ಎಂಬ ಆಘಾತಕಾರಿ ಸಂಗತಿ ವಿಚಾರಣೆಯಿಂದ ಬಹಿರಂಗಗೊಂಡಿದೆ.. ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನನನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಭೀಕರವಾಗಿ ಕೊಲ್ಲಲಾಗಿತ್ತು. ಈ ಹತ್ಯೆ ಪ್ರಕರಣ ದೇಶಾದ್ಯಂತ ಆತಂಕ ಸೃಷ್ಟಿಸಿತ್ತು.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ನಂತರ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಘಟನೆಯಿಂದ ಪೋಷಕರು ಭಯಭೀತರಾಗಿದ್ದರು. ಕ್ಷಿಪ್ರ ತನಿಖೆ ನಡೆಸಿದ ಪೊಲೀಸ್ ವಿಶೇಷ ತಂಡ ಕೆಲವೇ ಗಂಟೆಗಳಲ್ಲಿ ಶಾಲಾ ವಾಹನದ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದರು. ಆತನನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಬಿಐ ಅಧಿಕಾರಿಗಳು ನಿನ್ನೆ ರಾತ್ರಿ ಅದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಘಾತಕರ ಸಂಗತಿ ಬಯಲಾಗಿದೆ.
ಓದಿನಲ್ಲಿ ತೀರಾ ಹಿಂದಿದ್ದ ಈ ವಿದ್ಯಾರ್ಥಿಯು ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದ. ಶಾಲೆಯಲ್ಲಿನ ವಿದ್ಯಾರ್ಥಿ ಮೃತಪಟ್ಟರೆ ರಜೆ ನೀಡಲಾಗುತ್ತದೆ. ಇದರಿಂದ ಪರೀಕ್ಷೆ ಮುಂದೂಡುತ್ತಾರೆ ಎಂದು ಸ್ಕೇಚ್ ಹಾಕಿದ ಆತನ ಶಾಲೆ ಆರಂಭಕ್ಕೆ ಮುನ್ನ ಶೌಚಾಲಯಕ್ಕೆ ಬಂದ ಪ್ರದ್ಯುಮ್ನನ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆಗೈದು ತರಗತಿಗೆ ಹಾಜರಾಗಿದ್ದ ಎಂಬುದು ಆತನ ವಿಚಾರಣೆಯಿಂದ ತಿಳಿದುಬಂದಿದೆ.
ಇದು ಲೈಂಗಿಕ ದೌರ್ಜನ್ಯಕ್ಕಾಗಿ ನಡೆದ ಕೊಲೆ ಅಲ್ಲ. ಪರೀಕ್ಷೆ ಮುಂದೂಡಲು ದುಷ್ಟ ವಿದ್ಯಾರ್ಥಿ ನಡೆಸಿದ ಭೀಕರ ಕೊಲೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಚಾಲಕನಿಗೆ ಸಿಬಿಐ ಕ್ಲೀನ್‍ಚಿಟ್ ನೀಡಿದೆ.

Facebook Comments

Sri Raghav

Admin