ಪೊಲೀಸರ ಭರ್ಜರಿ ಕಾರ್ಯಾಚರಣೆ ; 8 ಮಂದಿ ಬಂಧನ, 37 ಲಕ್ಷದಷ್ಟು ನಗದು, ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

newla-pol-1
ನೆಲಮಂಗಲ, ನ.8- ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೆಲಮಂಗಲ ಉಪವಿಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 25 ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಿ 37 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಔಷಧಿ ತಯಾರಿಕಾ ಬಿಡಿ ಭಾಗಗಳು ಮತ್ತು 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ನೆಲಮಂಗಲ ಪಟ್ಟಣದಲ್ಲಿ 13 ಪ್ರಕರಣ, ನೆಲಮಂಗಲ ಗ್ರಾಮಾಂತರದಲ್ಲಿ 3, ತ್ಯಾಮಗೊಂಡ್ಲುವಿನಲ್ಲಿ 1, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಪ್ರಕರಣ ಸೇರಿದಂತೆ 25 ಪ್ರಕರಣಗಳಲ್ಲಿ ಭಾಗಿಯಾಗಿರುವ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ನೆಲಮಂಗಲ ಪಟ್ಟಣ: ನೆಲಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಗರಾಜು (24), ಹೇಮಂತ (21), ಅಜಯ್ (21) ಎಂಬುವರನ್ನು ಬಂಧಿಸಲಾಗಿದ್ದು, ಇವರಿಂದ 13 ಪ್ರಕರಣಗಳು ಬೆಳಕಿಗೆಬಂದಿವೆ. ಆನೇಕಲ್, ಸರ್ಜಾಪುರ ಪೊಲೀಸ್ ಠಾಣೆಯಲ್ಲೂ ಒಂದೊಂದು ಪ್ರಕರಣವಿದ್ದು, ಇವರಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.

ನೆಲಮಂಗಲ ಗ್ರಾಮಾಂತರ: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕಲಿ ಔಷಧಿ ತಯಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ (22), ಇತರೆ 6 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ 8.75 ಲಕ್ಷ ರೂ. ಮೌಲ್ಯದ ಔಷಧಿ ತಯಾರಿಕಾ ಬಿಡಿ ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ.

ತ್ಯಾಮಗೊಂಡ್ಲು: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ (19), ತೇಜಸ್ (19) ಎಂಬ ಆರೋಪಿಗಳನ್ನು ತ್ಯಾಮಗೊಂಡ್ಲು ಪೊಲೀಸರು ಬಂಧಿಸಿದ್ದಾರೆ. ಇವರು ಮಹಿಳೆಯೊಬ್ಬರಿಂದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಬಂಧಿಸಲಾಗಿರುವ ಆರೋಪಿಗಳಿಂದ 1.25 ಲಕ್ಷ ರೂ. ಬೆಲೆಬಾಳುವ 47 ಗ್ರಾಂಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

ಮಾದನಾಯಕನಹಳ್ಳಿ: ಹಸುಗಳನ್ನು ಕದ್ದು ಸಾಗಾಟಮಾಡುತ್ತಿದ್ದ ಆರೋಪಿಗಳಾದ ಉಸ್ಮಾನ್ ಪಾಷ, ಅನ್ಸರ್ ಅಲಿ, ಮಹಮ್ಮದ್ ಜಮೀರ್, ಸೈಫ್ ಅಲಿಖಾನ್, ವಾಸೀಂಖಾನ್ ಎಂಬುವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳಿಂದ 11 ಸೀಮೆಹಸುಗಳು, 50 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ವಶ: ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಕುಮಾರ್ ಅಲಿಯಾಸ್ ಗೇಲ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ 2 ಲಕ್ಷ ರೂ.ಮೌಲ್ಯದ 850 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಪಿ ಮಾಹಿತಿ ನೀಡಿದರು. ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‍ಪಿ ರಾಜೇಂದ್ರಕುಮಾರ್, ಸಿಪಿಐಗಳಾದ ಶಿವಣ್ಣ, ನಾಗರಾಜ್, ಪಿಎಸ್‍ಐಗಳಾದ ಮಂಜುನಾಥ್, ಕಾಳೇಗೌಡ, ಮಂಜೇಗೌಡ, ರಾಘವೇಂದ್ರ ಮತ್ತಿತರರಿದ್ದರು.

Facebook Comments

Sri Raghav

Admin