500-1000 ರೂ. ನೋಟು ನಿಷೇಧ : ಕಳೆದೊಂದು ವರ್ಷದಲ್ಲಿ ಏನೇನಾಯ್ತು..?
ಬೆಂಗಳೂರು,ನ.8-ಕಳೆದ ನವೆಂಬರ್ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಇಂದಿಗೆ ಒಂದು ವರ್ಷ. ಈ ಅವಧಿಯಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಔದ್ಯಮಿಕ ಕ್ಷೇತ್ರದಲ್ಲಿ ಉಂಟಾದ ಅಲ್ಲೋಲ ಕಲ್ಲೋಲ, ವ್ಯಾಪಾರ ವಹಿವಾಟುಗಳಲ್ಲಿ ಆದ ಏರುಪೇರು, ಜನಜೀವನದಲ್ಲಿ ಉಂಟಾದ ವ್ಯತ್ಯಯ ಮತ್ತು ಅಸ್ತವ್ಯಸ್ತತೆ ಏನು ಎಂಬುದನ್ನು ಎಲ್ಲರಿಗೂ ಗೊತ್ತಿದೆ. ನೋಟು ನಿಷೇಧದ ಆರಂಭದಲ್ಲಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೊಳಗಾದರು. ಜನಸಾಮಾನ್ಯರ ದೈನಂದಿನ ಜೀವನ ನಿರ್ವಹಣೆ ಕೂಡ ದುಸ್ತರವಾಯಿತು. ಕೂಲಿನಾಲಿ, ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರ ಮಾಡಿ ಬದುಕುತ್ತಿದ್ದ ಲಕ್ಷಾಂತರ ಜನ ಒಂದು ಹೊತ್ತಿನ ಅನ್ನಕ್ಕೂ ಪರದಾಡುವಂತಾಯಿತು. ಮಕ್ಕಳ ಮದುವೆ ಮಾಡಲಾಗದೆ ಕೆಲವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಸೇರಿದಂತೆ ಹಲವು ಜೀವಗಳು ಬಲಿಯಾದವು. ಇದು ಕೂಡ ಎಲ್ಲರಿಗೂ ಗೊತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದೇಶದ ಅರ್ಥವ್ಯವಸ್ಥೆ ಮೂರಾಬಟ್ಟೆಯಾಯಿತು.
ನಮ್ಮದು ಕೃಷಿ ಪ್ರಧಾನವಾದ ಹಳ್ಳಿಗಳ ದೇಶ. ಹಾಗಾಗಿ ಇಲ್ಲಿನ ಅರ್ಥವ್ಯವಸ್ಥೆಯ ಸ್ವರೂಪಕ್ಕೂ ಮುಂದುವರೆದ ರಾಷ್ಟ್ರಗಳ ಅರ್ಥ ವ್ಯವಸ್ಥೆಯ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ. ಕಳೆದ ವರ್ಷಗಳಲ್ಲಿ ಅಲ್ಪಸ್ವಲ್ಪ ಚೇತರಿಸಿ ಕೊಂಡಿದ್ದ ದೇಶದ ಸಮಗ್ರ ಆರ್ಥಿಕ ಪ್ರಗತಿ(ಜಿಡಿಪಿ) ಕುಸಿದಿರುವುದು, ನಿರೀಕ್ಷಿತ ಮಟ್ಟದಲ್ಲಿ ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗದಿರುವುದು, ಜನರ ದಿನಬಳಕೆ ವಸ್ತುಗಳ ಬೆಲೆಗಳು ಇಳಿಕೆಯಾಗದಿರುವುದು, ಇನ್ನು ರಿಯಲ್ ಎಸ್ಟೇಟ್ನಂತಹ ಉದ್ಯಮಗಳು ಕುಸಿತ ಕಂಡಿರುವುದು ಒಂದು ಪಾಲಾದರೆ ಇನ್ನು ಕೃಷಿ ಕ್ಷೇತ್ರದ ಬಗ್ಗೆ ಹೇಳುವುದಾದರೆ ಬೆಳೆಗಳಿಗೆ ಬೆಲೆ ಸಿಗದೆ ರೈತರು, ಕೃಷಿ ಕಾರ್ಮಿಕರು ಕಂಗಾಲಾಗಿದ್ದಾರೆ. ಇನ್ನೊಂದು ವಿಶೇಷ ಎಂದರೆ ರೈತ ಬೆಳೆದ ಬೆಳೆಗಳ ಬೆಲೆ ಪಾತಾಳಕ್ಕೆ ಕುಸಿದಿದ್ದರೆ ಅವೇ ಪದಾರ್ಥಗಳನ್ನು ಜನ ಮಾರುಕಟ್ಟೆಯಲ್ಲಿ ಖರೀದಿಸುವ ಬೆಲೆ ಗಗನಕ್ಕೇರಿದೆ. ಇದೆಲ್ಲವೂ ಇಂದಿನ ಅರ್ಥವ್ಯವಸ್ಥೆಯ ನಗ್ನ ಸತ್ಯ.
ಇನ್ನು ದೇಶದ ಆರ್ಥಿಕ ಪ್ರಗತಿ ಬದಿಗಿರಿಸಿ ನಮ್ಮ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನೋಟು ನಿಷೇಧ ಕ್ರಮ ಮತ್ತು ಜಿಎಸ್ಟಿ(ಸರಕು-ಸೇವೆ ತೆರಿಗೆ) ಎಂದರೆ ಏನೆಂಬುದು ಬಹುತೇಕ ಶೇ.79ರಷ್ಟು ಗ್ರಾಮೀಣ ಪ್ರದೇಶದ ಬಡಜನತೆಗೆ ಇನ್ನೂ ಕೂಡ ಅರ್ಥವಾಗಿಲ್ಲ. ಗ್ರಾಮೀಣ ಪ್ರದೇಶದ ರೈತರು ಮತ್ತು ಕಾರ್ಮಿಕರು ಪ್ರಮುಖವಾಗಿ ಕೇಳುವ ಪ್ರಶ್ನೆಯೆಂದರೆ, ಬೆಳೆದ ಬೆಳೆಗೆ ಬೆಲೆ ಇಲ್ಲ. ಆದರೆ ಮಾರುಕಟ್ಟೆ ಧಾರಣೆಗಳು ತಗ್ಗಿಲ್ಲ. ನಾವು ಬದುಕುವುದು ಹೇಗೆ?
ಒಂದು ಹಂತದಲ್ಲಿ ನೋಟು ನಿಷೇಧ ಜಿಎಸ್ಟಿ ಎರಡೂ ಒಳ್ಳೆಯ ನಿರ್ಧಾರಗಳೇ. ಆದರೆ ರಾಜಕೀಯ ನಾಯಕರು ಈ ನಿರ್ಧಾರಗಳನ್ನು ಎರಡು ಹಂತಗಳಾಗಿ ವಿಂಗಡಿಸಬಹುದಿತ್ತು. ಒಂದು ಶಾರ್ಟ್ ಟರ್ಮ್(ಅಲ್ಪಾವಧಿ) ಇನ್ನೊಂದು ಲಾಂಗ್ ಟರ್ಮ್(ದೀರ್ಘಾವಧಿ). ಹಾಗೆ ಮಾಡಿದ್ದರೆ ಈ ಕ್ರಮಗಳು ನಿರೀಕ್ಷಿಸಿದಂತೆ, ನಿಗದಿತ ಸಮಯದಲ್ಲಿ ಒಳ್ಳೆಯ ಪರಿಣಾಮ ಬೀರುತ್ತಿದ್ದವು.
ಮೊದಲನೆಯ ಅಲ್ಪಾವಧಿ ಹಂತದಲ್ಲಿ ಕೃಷಿಕರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಮತ್ತಿತರೆ ಜನಸಾಮಾನ್ಯರು ಬರುತ್ತಿದ್ದರು. ಇನ್ನು 2ನೇ ಹಂತದಲ್ಲಿ ನಗರ ಪ್ರದೇಶದ ದೊಡ್ಡ ಕುಳಗಳು, ಅಧಿಕಾರಿಗಳು, ಉದ್ಯಮಿಗಳು ಬರುತ್ತಿದ್ದರು. ಆಗ ಸಾಮಾಜಿಕ ಮತ್ತು ಆರ್ಥಿಕ ಸಮತೋಲನಗಳನ್ನು ಕಾಪಾಡಿಕೊಳ್ಳಬಹುದಿತ್ತು. ಜನರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಬಹುದಿತ್ತು.
ಕರ್ನಾಟಕದ ಸ್ಥಿತಿಗತಿ:
ಕರ್ನಾಟಕದಲ್ಲಿ ಇರುವ 30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೂ ತನ್ನದೇ ಆದ ಆದಾಯ ಮೂಲ ಮತ್ತು ಅರ್ಥ ವ್ಯವಸ್ಥೆ ಇದೆ. ಈ ವ್ಯವಸ್ಥೆಯ ಮಾರ್ಪಾಡು ಅತ್ಯಂತ ಸೂಕ್ಷ್ಮವಾದ ವಿಚಾರ. ಉದಾಹರಣೆಗೆ ಹೈದರಾಬಾದ್ ಕರ್ನಾಟಕದ ಬಳ್ಳಾರಿ. ಇಲ್ಲಿ ಜೀನ್ಸ್ ಉದ್ಯಮ. ಈ ಉದ್ಯಮ ಪ್ರಮುಖವಾಗಿದೆ. ಇದನ್ನು ಅವಲಂಬಿಸಿ ಸುಮಾರು 25 ಸಾವಿರ ಕುಟುಂಬಗಳು ಬದುಕುತ್ತಿವೆ. ಆದರೆ ನೋಟು ನಿಷೇಧದಿಂದ ಉದ್ಯಮಿಗಳು ಕಚ್ಚಾ ಮಾಲು ಖರೀದಿಸಲಾಗದೆ ಅರ್ಧಕ್ಕಿಂತಲೂ ಹೆಚ್ಚಿನ ಉದ್ಯಮ ಸ್ಥಗಿತಗೊಂಡಿತ್ತು. 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಉಪವಾಸ ಬೀಳಬೇಕಾಯಿತು.
ಉತ್ತರ ಕರ್ನಾಟಕದ ವಿಜಯಪುರ ದ್ರಾಕ್ಷಿ ಬೆಳೆಗೆ ಹೆಸರುವಾಸಿ. ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಒಂದು ವರ್ಷದ ಹಿಂದೆ ಹೆಚ್ಚು ಕಡಿಮೆ 100 ರೂ.ಗಳಿಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ (ಹಣ್ಣು) 200 ರೂ.ಗಳಿಗೆ ಮಾರಾಟವಾಗುತ್ತಿದ್ದ ಒಣ ದ್ರಾಕ್ಷಿಯನ್ನು ಇಂದು 25-50 ರೂ.ಗೂ ಕೇಳುವವರಿಲ್ಲ. ಅಲ್ಲಿನ ರೈತರು ಮತ್ತು ಕಾರ್ಮಿಕರ ಸ್ಥಿತಿ ಏನಾಗಿದೆ ಎಂಬುದನ್ನು ನೀವೇ ಊಹಿಸಬಹುದು. ಇನ್ನು ಮಲೆನಾಡು ಕೇಂದ್ರ ಶಿವಮೊಗ್ಗ ಅತಿದೊಡ್ಡ ಅಡಿಕೆ ಮಾರುಕಟ್ಟೆ ಹೊಂದಿದೆ. ಇಲ್ಲಿ ನೋಟು ನಿಷೇಧ ಮತ್ತು ಜಿಎಸ್ಟಿಯಿಂದಾಗಿ ಅಡಿಕೆ ಬೆಳೆಗಾರರು ಅಡ್ಡ ಮಲಗುವಂತಾಯಿತು. ಅದೇ ರೀತಿ ಚಿಕ್ಕಮಗಳೂರು, ಕೊಡಗು, ಹಾಸನ, ಕರಾವಳಿ ಜಿಲ್ಲೆಗಳ ಸ್ಥಿತಿಯೂ ಭಿನ್ನವಾಗಿಲ್ಲ.
ಮಧ್ಯ ಕರ್ನಾಟಕ ಚಿತ್ರದುರ್ಗದಲ್ಲಿ ಶೇ.70ರಷ್ಟು ರೈತರಿಗೆ ಆಧಾರವಾಗಿರುವುದು ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ದಳ್ಳಾಳಿ ಮಂಡಿಗಳು. ಈ ಮಂಡಿಗಳಲ್ಲಿ ಹಣ ಓಡಾಡಿದರೆ ಮಾತ್ರ ಜಿಲ್ಲೆಯ ರೈತರು ಕೂಡ ಓಡಾಡುತ್ತಾರೆ. ಆದರೆ ಕಳೆದ ಒಂದು ವರ್ಷದಿಂದ ದಲ್ಲಾಳಿ ಮಂಡಿಗಳು ನಿಟ್ಟುಸಿರು ಬಿಡುತ್ತಿದ್ದು , ರೈತರು ಕಂಗಾಲಾಗಿದ್ದಾರೆ. ಹಾಗೆಯೇ ಭೀಮಸಮುದ್ರದ ಅಡಿಕೆ ಮಾರುಕಟ್ಟೆಯು ಕುಸಿದಿದೆ. ಹೀಗೆ ಈ ಪಟ್ಟಿ ಬೆಳೆಯುತ್ತದೆ. ಮೇಲೆ ಹೇಳಿದ ಜಿಲ್ಲೆಗಳು ಕೇವಲ ಉದಾಹರಣೆಯಷ್ಟೆ. ಇನ್ನೊಂದು ಅಂಶ ಗಮನಿಸಬೇಕು. ತೆರಿಗೆ ಪಾವತಿಸಿ ಸಕ್ರಮವಾಗಿ ನಡೆಸುವ ಯಾವುದೇ ಉದ್ಯಮ ನೋಟು ನಿಷೇಧದಿಂದ ನರಳುವ ಪರಿಸ್ಥಿತಿ ಬರಲಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಅಂತಹ ಉದ್ಯಮಗಳು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡು ಲಾಭ ಗಳಿಸಿದವು. ಇದು ನೋಟು ನಿಷೇಧದ ಫಲ.
ಎರಡು ಹಂತಗಳಲ್ಲಿ :
ಮೊದಲ ಹಂತದ ಆರ್ಥಿಕ ಸುಧಾರಣೆ ಕ್ರಮಗಳಲ್ಲಿ ಇಂತಹ ಮೂಲಭೂತವಾದ ಅರ್ಥ ವ್ಯವಸ್ಥೆಯನ್ನು ಕಾಪಾಡಿಕೊಂಡು ನಂತರ 2ನೇ ಹಂತದ ಸುಧಾರಣೆಗೆ ಸರ್ಕಾರ ಕೈ ಹಾಕಿದ್ದರೆ ಅದನ್ನು ಯಾರೂ ಆಕ್ಷೇಪಿಸುತ್ತಿರಲಿಲ್ಲ. ಈಗಿನ ಈ ನೋಟು ನಿಷೇಧ, ಜಿಎಸ್ಟಿಯಿಂದ ಒಳ್ಳೆಯ ನಿರೀಕ್ಷಿತ ಫಲ ಸಿಗುವುದು ಖಂಡಿತ. ಆದರೆ ಅದಕ್ಕೆ ಕಾಯಬೇಕು. ಕಾಯುವಷ್ಟು ತಾಳ್ಮೆ , ಚೈತನ್ಯ ಈ ದೇಶದ ಬಡ ಜನತೆಗಿಲ್ಲ ಎಂಬುದನ್ನು ನಾವು ಮನಗಾಣಬೇಕು. ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕಪ್ಪು ಹಣ ದಂಧೆಕೋರರಿಗೆ ಕಡಿವಾಣ ಹಾಕುವ, ಭ್ರಷ್ಟಾಚಾರಿಗಳನ್ನು ಬಲಿ ಹಾಕುವ, ಭಯೋತ್ಪಾದನೆಯನ್ನು ಸದೆಬಡಿಯುವ ತಂತ್ರಗಳು ಕೂಡ ಮುಂದೆ ಸಾಕಷ್ಟು ಫಲ ನೀಡಲಿವೆ. ಆದರೆ ಸದ್ಯಕ್ಕೆ ಅದು ನಿರೀಕ್ಷಿತ ಪ್ರಮಾಣದಲ್ಲಿ ವರ್ಕೌಟ್ ಆಗಿಲ್ಲ.
ಇನ್ನೂ ಎಣಿಕೆ ಮುಗಿದಿಲ್ಲ:
ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನೀಡಿರುವ ಲೆಕ್ಕಾಚಾರದ ಪ್ರಕಾರ ನೋಟು ನಿಷೇಧದಿಂದ ವಿವಿಧ ಬ್ಯಾಂಕ್ಗಳಿಗೆ ಜಮಾ ಆಗಿರುವ ಸುಮಾರು 90 ಲಕ್ಷ ಕೋಟಿ ನಗದಿನ ಪೈಕಿ ಇನ್ನು 10.91 ಲಕ್ಷ ಕೋಟಿ ಹಣದ ಎಣಿಕೆ ಮುಗಿದಿಲ್ಲ. 500 ರೂ. ಮುಖಬೆಲೆಯ 1,134 ಕೋಟಿ ರೂ. 1000 ರೂ. ಮುಖಬೆಲೆಯ 524.90 ಕೋಟಿ ರೂ. ಮೌಲ್ಯದ (ಅಂದರೆ, 5.67 ಲಕ್ಷ ಕೋಟಿ 500 ರೂ. ನೋಟುಗಳು ಮತ್ತು 5.24 ಲಕ್ಷ ಕೋಟಿ 1000 ರೂ.) ನೋಟುಗಳು , ಒಟ್ಟಾರೆ 10.91 ಲಕ್ಷ ಕೋಟಿ ರೂ. ನೋಟುಗಳ ಎಣಿಕೆ ಬಾಕಿ ಇದೆಯಂತೆ.