ಅಪ್ಪಾಜಿ ಕ್ಯಾಂಟೀನ್‍ಗೆ ಯಶಸ್ವೀ 100 ದಿನದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Appaji-Canteen--0004

ಬೆಂಗಳೂರು,ನ.9- ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತ ನಗರದಲ್ಲಿ ಆರಂಭಿಸಿದ್ದ ಅಪ್ಪಾಜಿ ಕ್ಯಾಂಟೀನ್‍ಗೆ ಇಂದು 100 ದಿನದ ಸಂಭ್ರಮ. ನಿತ್ಯ ಎರಡೂವರೆ ಸಾವಿರ ಮಂದಿಯಂತೆ ಇದುವರೆಗೂ ಎರಡೂವರೆ ಲಕ್ಷ ಮಂದಿ ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಊಟ, ತಿಂಡಿ ಮಾಡಿದ್ದಾರೆ.

ಚಿತ್ರನಟಿ ಶರ್ಮಿಳಾ ಮಾಂಡ್ರೆ ಅವರು ಕೂಡ ಇಂದು ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಊಟ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರವಣ, ಜೆಡಿಎಸ್ ಪ್ರಧಾನ ಕಚೇರಿ ಜೆಪಿಭವನದಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸುವ ಉದ್ದೇಶವಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿ ಜೆಡಿಎಸ್ ಅಧಿಕಾರಕ್ಕೆ ತಂದರೆ ರಾಜ್ಯಾದ್ಯಂತ ಅಪ್ಪಾಜಿ ಕ್ಯಾಂಟೀನ್‍ನನ್ನು ತೆರೆಯಲಾಗುವುದು.

ಕಳೆದ 100 ದಿನಗಳಿಂದಲೂ ಶುಚಿ-ರುಚಿಯಾದ ತಿಂಡಿ, ಊಟವನ್ನು ನೀಡುತ್ತಿದ್ದು , ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ಕೆಲಸಗಾರರಿಗೆ ಇದರಿಂದ ಅನುಕೂಲವಾಗಿದ್ದು , ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ನನ್ನ ಸ್ವಂತ ಹಣದಿಂದ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಆದರೆ ರಾಜ್ಯ ಸರ್ಕಾರ ಬೆಂಗಳೂರಿನ ವಾರ್ಡ್‍ಗೊಂದರಂತೆ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಅಪ್ಪಾಜಿ ಕ್ಯಾಂಟೀನ್‍ನಂತೆ ಯಶಸ್ವಿಯಾಗಿಲ್ಲ.

ಶುಚಿ-ರುಚಿಯ ಕೊರತೆಯ ಜೊತೆಗೆ ಹಲವು ದೋಷಗಳಿಂದ ಕೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಯಶಸ್ವಿಯಾಗದ ಇಂದಿರಾ ಕ್ಯಾಂಟೀನ್ ರಾಜ್ಯಾದ್ಯಂತ ವಿಸ್ತರಣೆ ಮಾಡಿ ಚುನಾವಣಾ ಪ್ರಚಾರ ಗಿಟ್ಟಿಸಿಕೊಳ್ಳಲು ಹವಣಿಸಲಾಗುತ್ತಿದೆ. ಇಂದಿರಾ ಕ್ಯಾಂಟೀನ್‍ಗೆ ಜನರ ತೆರಿಗೆ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಆದರೂ ಯಾಕೆ ಯಶಸ್ವಿಯಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಇನ್ನಾದರೂ ಲೋಪದೋಷಗಳನ್ನ ಸರಿಪಡಿಸಿಕೊಂಡು ಗುಣಮಟ್ಟದ ಆಹಾರವನ್ನು ಹಸಿದವರಿಗೆ ನೀಡುವಂತ ಕೆಲಸ ಮಾಡಲಿ ಎಂದು ಶರವಣ ತಿಳಿಸಿದರು.

Facebook Comments

Sri Raghav

Admin