ಐಟಿ ರೇಡ್ ಮಾಡಿಸಿ ಬಿಜೆಪಿ ಸೇರಲು ಡಿಕೆಶಿಗೆ ಬ್ಲಾಕ್ ಮೇಲ್ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಹುಬ್ಬಳ್ಳಿ,ನ.9- ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹುಟ್ಟಾ ಕಾಂಗ್ರೆಸ್ಸಿಗರಾಗಿದ್ದು, ಅವರು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದರು. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಬಾಗಲಕೋಟೆಗೆ ತೆರಳುವ ಮಾರ್ಗಮಧ್ಯೆ ನಗರದ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ನಿಲುಗಡೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ರೇಡ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದೆ ಅದು ಯಾವುದೂ ಫಲಿಸುವುದಿಲ್ಲ ಎಂದರು.

ಕಾಂಗ್ರೆಸ್‍ನ ಕೆಲವು ಶಾಸಕರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ ಹಲವಾರು ಶಾಸಕರು ನಮ್ಮ ಪಕ್ಷಕ್ಕೆ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಂದರ್ಭ ಬಂದಾಗ ಈ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು. ಟಿಪ್ಪು ಜಯತಿ ಬಗ್ಗೆ ಪ್ರಸ್ತಾಪಿಸಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಹಾಗೂ ಜಗದೀಶ್ ಶೆಟ್ಟರ್ ಅಧಿಕಾರದಲ್ಲಿದ್ದಾಗ ವೇದಿಕೆ ಮೇಲೆ ಟಿಪ್ಪು ಖಡ್ಗ ಹಿಡಿದು ಪೇಟ ಧರಿಸಿ ಜಯಂತಿ ಆಚರಿಸಿದರು. ಈಗೇಕೆ ವಿರೋಧಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಅವರೆಲ್ಲ ಎರಡು ನಾಲಿಗೆ ಮನುಷ್ಯರು ಎಂದು ವ್ಯಂಗ್ಯವಾಡಿದರು. ಟಿಪ್ಪು ಸುಲ್ತಾನ್ ಚರಿತ್ರೆ ಒಳಗೊಂಡ ಪುಸ್ತಕವನ್ನು ಮೈಸೂರಿನ ಸಾಹಿತಿ ಷೇಕ್‍ಅಲಿ ಬರೆದಿದ್ದು, ಅದಕ್ಕೆ ಜಗದೀಶ್ ಶೆಟ್ಟರ್ ಅವರೇ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು.

ಮೋದಿಯವರ ನೋಟ್ ಬ್ಯಾನ್‍ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೇಶ ಯಾವುದೇ ಸುಧಾರಣೆಕಂಡಿಲ್ಲ. ಉಗ್ರರಿಗೆ ಹಣ ರವಾನೆ ಮಾಡುವುದು, ಹಣದುಬ್ಬರ ನಿಯಂತ್ರಣ, ಭ್ರಷ್ಟಾಚಾರ, ನಕಲಿ ನೋಟು ತಡೆಗೆ ಕಡಿವಾಣ ಹಾಕಲಾಗುವುದೆಂದು ಪ್ರಧಾನಿ ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಹೇಳಿದರು.
ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೀರಾ ಎಂಬ ಪ್ರಶ್ನೆಗೆ ಶಿಫಾರಸ್ಸು ಮಾಡುವುದು ನನ್ನ ಕೆಲಸ. ತೀರ್ಮಾನ ತೆಗೆದುಕೊಳ್ಳುವುದು ಕೇಂದ್ರಕ್ಕೆ ಬಿಟ್ಟ ವಿಷಯ ಎಂದರು.

Facebook Comments

Sri Raghav

Admin