ಜಯಾ ಟಿವಿ, ಶಶಿಕಲಾ ಮನೆ-ಕಚೇರಿಗಳ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Jaya--03

ಚೆನ್ನೈ, ನ.9- ದಿ.ಮುಖ್ಯಮಂತ್ರಿ ಜಯಲಲಿತಾ ಒಡೆತನದ ಜಯಾ ಟಿವಿ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಜೈಲು ಪಾಲಾಗಿರುವ ಜಯಾ ಪರಮಾಪ್ತೆ ವಿ.ಕೆ.ಶಶಿಕಲಾ ನಟರಾಜನ್ ಅವರ ನಿವಾಸ ಹಾಗೂ ಅವರ ಆಪ್ತೇಷ್ಟರಿಗೆ ಸೇರಿದ ಸುಮಾರು 125ಕ್ಕೂ ಹೆಚ್ಚು ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಭಾರೀ ಪ್ರಮಾಣದ ದಾಖಲೆ-ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಸಂಪತ್ತು ಗಳಿಕೆ ಆಪಾದನೆಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಮತ್ತು ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್(ಚಿನ್ನಮ್ಮ) ಅವರಿಗೆ ಒಂದರ ಮೇಲೆ ಒಂದು ಕಂಟಕಗಳು ಎದುರಾಗುತ್ತಲೇ ಇವೆ. ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ಮುಂಜಾನೆ ಚಿನ್ನಮ್ಮ ಸುಪರ್ದಿಯಲ್ಲಿರುವ ಜಯಾ ಟಿವಿ ಕಚೇರಿ ಸೇರಿದಂತೆ ವಿವಿಧ ನಗರಗಳ 125ಕ್ಕೂ ಹೆಚ್ಚು ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ಕ್ಷಿಪ್ರ ಕಾರ್ಯಾಚರಣೆ ವೇಳೆ ಭಾರೀ ತೆರಿಗೆ ವಂಚನೆ ಮತ್ತು ಅಕ್ರಮಗಳು ಬೆಳಕಿಗೆ ಬಂದಿವೆ. ಹಲವಾರು ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಐಟಿ ಅಧಿಕಾರಿಗಳು ಜಯಾ ಟಿವಿಗೆ ಸಂಬಂಧಿಸಿದ ನಿರ್ದೇಶಕರು, ಆಡಳಿತಾಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳು, ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಮತ್ತು ಕುಟುಂಬಸ್ಥರ ಮನೆಗಳು ಸೇರಿದಂತೆ 120ಕ್ಕೂ ಹೆಚ್ಚು ಕಡೆಗಳಲ್ಲಿ ಈ ದಾಳಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ, ತಿರುವಾರೂರು, ತಂಜಾವೂರು, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ವಿವಿಧ ಮಹಾನಗರಗಳಲ್ಲಿರುವ ಶಶಿಕಲಾ ಸಂಬಂಧಿಕರ ಮನೆ ಮತ್ತು ನಿವಾಸಗಳ ಮೇಲೆ ದಾಳಿ ಮುಂದುವರಿದಿದೆ.  ಶೆಲ್(ನಕಲಿ)ಕಂಪನಿಗಳು, ಬೇನಾಮಿ ಆಸ್ತಿ ಗಳಿಕೆ, ಅಕ್ರಮ ಹೂಡಿಕೆಗಳು, ಹಣಕಾಸು ಅವ್ಯವಹಾರಗಳು, ಲೆಕ್ಕಪತ್ರಗಳ ವಂಚನೆ ಆರೋಪಗಳ ಹಿನ್ನೆಲೆಯಲ್ಲಿಯೂ ಈ ದಾಳಿಗಳು ನಡೆದಿವೆ.

ತೆರಿಗೆ ವಂಚನೆ ಆರೋಪದ ಅಡಿ ಮೊದಲಿಗೆ ಐಟಿ ಅಧಿಕಾರಿಗಳ ತಂಡವು ಚೆನ್ನೈನ ಎಕ್ಕತ್ತುತಂಗಳ್‍ನಲ್ಲಿರುವ ಜಯಾ ಟಿವಿ ಕಚೇರಿಗೆ ದಾಳಿ ಮಾಡಿದರು. ನಂತರ ಚಿನ್ನಮ್ಮ ಸುಪರ್ದಿಯಲ್ಲಿರುವ ಜಾಜ್ ಸಿನಿಮಾಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಕಾಂಪ್ಲೆಕ್ಸ್‍ಗಳು, ಮಿಡಾಸ್ ಡಿಸ್ಟಿಲ್ಲರಿಗಳ ಮೇಲೂ ದಾಳಿ ನಡೆಯಿತು. ಈ ದಾಳಿಗಳ ವೇಲೆ ತೆರಿಗೆ ವಂಚನೆ ಮತ್ತು ಇತರ ದುವ್ರ್ಯವಹಾರಗಳು ದೃಢಪಟ್ಟಿದ್ದು, ಈ ಸಂಸ್ಥೆಗೆ ಸಂಬಂಧಪಟ್ಟ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ವಶಪಡಿಸಿಕೊಂಡು ಅಧಿಕಾರಿಗಳ ವಿಚಾರಣೆ ಮುಂದುವರಿಸಿದ್ದಾರೆ.  ಇದೇ ವೇಳೆ ಎಐಎಡಿಎಂಕೆ ಉಚ್ಚಾಟಿತ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ಮನೆ ಮತ್ತು ಕಚೇರಿಗಳು, ಶಶಿಕಲಾ ನಿಕಟ ಸಂಬಂಧಿಕರು, ಶಶಿಕಲಾರೊಂದಿಗೆ ಕಾರಾಗೃಹದಲ್ಲಿರುವ ಇಳವರಸಿ ಮತ್ತವರ ಪುತ್ರಿಯರ ನಿವಾಸಗಳು ಮತ್ತು ಆಪ್ತೇಷ್ಟರ ನಿವಾಸಗಳ ಮೇಲೂ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ದೊಡ್ಡ ಮಟ್ಟದ ತೆರಿಗೆ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.  ಬೆಳಗ್ಗೆಯಿಂದಲೇ ಆರಂಭವಾದ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯಲ್ಲಿ 700ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ 10 ತಂಡಗಳಲ್ಲಿ ಭಾಗವಹಿಸಿದ್ದರು ಎಂದು ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಾಳಿಗಳ ವೇಳೆ ನಡೆಸಲಾದ ವಿಚಾರಣೆಗಳಿಂದ ಮತ್ತಷ್ಟು ತೆರಿಗೆ ವಂಚನೆ ಮತ್ತು ಅಕ್ರಮಗಳು ಬೆಳಕಿಗೆ ಬಂದಿದ್ದು, ರೇಡು ಮತ್ತಷ್ಟು ಬಿರುಸುಗೊಳ್ಳಲಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.  ಐಟಿ ದಾಳಿಯಿಂದ ಶಶಿಕಲಾ ಮತ್ತು ದಿನಕರನ್ ಬಣಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇನ್ನು ಚಿನ್ನಮ್ಮ ಅವರನ್ನು ಗುರಿಯಾಗಿಟ್ಟುಕೊಂಡು ನಡೆದ ಈ ದಾಳಿ ಹಿಂದೆ ಆಡಳಿತಾರೂಢ ಎಐಎಡಿಎಂಕೆ ಕೈವಾಡ ಇದೆ. ಇದಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಇ.ಪನ್ನೀರ್ ಸೆಲ್ವಂ ಕುಮ್ಮಕ್ಕು ನೀಡಿದ್ದಾರೆ ಎಂದು ಚಿನ್ನಮ್ಮ ನಿಷ್ಠರು ಆರೋಪಿಸಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಡಿಎಂಕೆ ಒಡೆತನದ ಸನ್ ಟಿವಿಗೆ ಪರ್ಯಾಯವಾಗಿ ಜಯಾ ಟಿವಿ ಆರಂಭಿಸಿದ್ದರು. ಜಯಾ ನಿಧನಾನಂತರ ಈ ವಾಹಿನಿಯನ್ನು ಚಿನ್ನಮ್ಮ ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಿಸುತ್ತಿದ್ದರು. ಅವರು ಜೈಲು ಪಾಲಾದ ನಂತರ ವಿವೇಕ್ ಜಯರಾಮನ್ ನೇತೃತ್ವದಲ್ಲಿ ಶಸಿಕಲಾ ಕುಟುಂಬದವರು ಜಯಾ ಟಿವಿಯನ್ನು ನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin