ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿ ಮುಖಂಡ ಎ.ಎಚ್.ಆನಂದ್ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

Anand--0112

ಬೆಂಗಳೂರು,ನ.9-ರಾಜ್ಯ ಬಿಜೆಪಿ ಸಹ ವ್ಯಕ್ತಾರ ಹಾಗೂ ಯುವ ಮುಖಂಡ ಎ.ಎಚ್.ಆನಂದ್ ಅವರಿಗೆ ಮುಂಬರುವ ಬೆಂಗಳೂರು ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿದೆ.   ಮಂಗಳೂರಿನಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಆನಂದ್ ಅವರಿಗೆ ಟಿಕೆಟ್ ನೀಡಲು ಪಕ್ಷದ ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.  ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ , ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೋರ್ ಕಮಿಟಿ ಸದಸ್ಯರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಜಗದೀಶ್ ಶೆಟ್ಟರ್ , ಕೆ.ಎಸ್.ಈಶ್ವರಪ್ಪ , ಪ್ರಹ್ಲಾದ್ ಜೋಷಿ, ನಳೀನ್‍ಕುಮಾರ್ ಕಟೀಲ್, ಆರ್.ಅಶೋಕ್ ಸೇರಿದಂತೆ ಮತ್ತಿತರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು ಪದವೀಧರ ಕ್ಷೇತ್ರದಿಂದ ಹಲವು ಹೆಸರುಗಳು ಕೇಳಿಬರುತ್ತಿದ್ದವು. ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ರಾಮಚಂದ್ರೇಗೌಡ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಬಿಜೆಪಿ ಪಾಳೆಯದಲ್ಲಿ ಆಕಾಂಕ್ಷಿಗಳ ಪಟ್ಟಿ ಸಾಕಷ್ಟಿತ್ತು.  ಜೆಡಿಎಸ್‍ನಲ್ಲಿದ್ದ ಆ ದೇವೇಗೌಡ, ರಾಮಚಂದ್ರೇಗೌಡ ಅವರ ಪುತ್ರ ಸಪ್ತಗಿರಿ ಗೌಡ, ಉಪನ್ಯಾಸಕ ಜಯಶಂಕರ್, ವಿಧಾನಪರಿಷತ್ ಮಾಜಿ ಅಶ್ವಥ್ ನಾರಾಯಣ ಸೇರಿದಂತೆ ಮತ್ತಿತರ ಹೆಸರುಗಳು ಚಾಲ್ತಿಯಲ್ಲಿದ್ದವು. ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಅ.ದೇವೇಗೌಡರನ್ನು ಬಿಜೆಪಿಗೆ ಸೆಳೆದು ಟಿಕೆಟ್ ನೀಡಲು ಪಕ್ಷದೊಳಗಿನ ಒಂದು ಗುಂಪು ಪ್ರಯತ್ನ ನಡೆಸಿತ್ತು. ಆದರೆ ಪಕ್ಷದ ಸಿದ್ದಾಂತದಂತೆ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಆನಂದ್ ಅವರಿಗೆ ಟಿಕೆಟ್ ನೀಡಲು ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ಹಿಂದೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಟಿಕೆಟ್ ನೀಡುವ ಸಂಬಂಧ ಯಡಿಯೂರಪ್ಪ , ಅನಂತಕುಮಾರ್, ಸದಾನಂದಗೌಡ, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು.

ಈ ಸಮಿತಿ ಕೂಡ ಈ ಕ್ಷೇತ್ರದಿಂದ ಆನಂದ್ ಅವರಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿತ್ತು ಎಂದು ತಿಳಿದುಬಂದಿದೆ. ಎಲ್ಲಾ ಸಾಧಕ-ಬಾಧಕಗಳನ್ನು ಗಮನಿಸಿದ ಪಕ್ಷದ ವರಿಷ್ಠರು ಅವರನ್ನೇ ಅಭ್ಯರ್ಥಿಯನ್ನಾಗಿಸಲು ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ವರಿಷ್ಠರು ಕಳುಹಿಸಿಕೊಡುವ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಪರಿಶೀಲನೆ ನಡೆಸಿ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಿದೆ. ಈ ಹಿಂದೆ ಆನಂದ್ ಅವರು ಪಕ್ಷ ವಹಿಸಿದ್ದ ಕೆಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.  ಅಲ್ಲದೆ ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಯಡಿಯೂರಪ್ಪನವರು ಅವರನು ಸಹ ವಕ್ತರರನ್ನಾಗಿ ನೇಮಕ ಮಾಡಿದ್ದರು.

Facebook Comments

Sri Raghav

Admin