ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Kumarasamy--JDS

ಶಿವಮೊಗ್ಗ, ನ.9- ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಸಮಸ್ಯೆ ಪರಿಹರಿಸದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ವಿಕಾಸವಾಹಿನಿ ಯಾತ್ರೆ ವೇಳೆ ಇಲ್ಲಿನ ಬುಳ್ಳಾಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆ ನಷ್ಟವಾಗಿದೆ. ರೈತರು ಕಂಗಾಲಾಗಿದ್ದಾರೆ. ಆದರೆ, ರಾಜ್ಯ-ಕೇಂದ್ರ ಸರ್ಕಾರಗಳು ರೈತರ ಬೆಂಬಲಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಅಷ್ಟೇ. ಆದರೆ, ಸಾಲದ ಹಣ ಪಾವತಿಸಲು ಈ ಸರ್ಕಾರದಲ್ಲಿ ಹಣವೇ ಇಲ್ಲ. ಮುಂದೆ ಬರುವ ಸರ್ಕಾರಕ್ಕೆ ಸಾಲದ ಹೊರೆ ಹೊರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ಮಾಡಿದೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಐಟಿ, ಇಡಿಯನ್ನು ದುರುಪಯೋಗ ಮಾಡಿಕೊಂಡರೆ, ರಾಜ್ಯ ಸರ್ಕಾರ ಸಿಐಡಿ ಮತ್ತು ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ದೂರಿದರು.

ಸಿದ್ದರಾಮಯ್ಯನವರ ನಾಲ್ಕೂವರೆ ವರ್ಷದ ಸಾಧನೆ ಕೇವಲ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದಕ್ಕಷ್ಟೇ ಸೀಮಿತ. ಅವರಿಗೆ ಜ್ಞಾನವಿಲ್ಲ. ಕಾಂಗ್ರೆಸ್ ನಾಯಕರು ಸರ್ಕಾರದ ಹಣವನ್ನು ಲೂಟಿ ಮಾಡಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಬೇನಾಮಿ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.  ರಾಜ್ಯದ ಎಲ್ಲ ಗ್ರಾಮಗಳ ಕಷ್ಟ ಅರಿಯಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇವೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮಗಳು ಅಭಿವೃದ್ಧಿಯಾಗಿವೆ. ನಾವು ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ 24 ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ. ಅಧಿಕಾರಕ್ಕೆ ಬಂದ ಎರಡು ಗಂಟೆಯೊಳಗೇ ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

Facebook Comments

Sri Raghav

Admin