ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ, ಬಿಗಿ ಭದ್ರತೆ ನಡುವೆ ಬಿರುಸಿನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Himachal-Predesha--01

ಶಿಮ್ಲಾ, ನ.9-ಹಿಮಾಯಲ ತಪ್ಪಲಿನ ರಾಜ್ಯ ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಾಗಿ ಇಂದು ಬಿರುಸಿನ ಮತದಾನ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಫರ್ಧಾ ಕಣವಾಗಿರುವ ದೇವಭೂಮಿ ರಾಜಕೀಯ ಸಂಗ್ರಾಮಕ್ಕೆ ಸಾಕ್ಷಿಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು 61 ಶಾಸಕರೂ ಸೇರಿದಂತೆ 337 ಹುರಿಯಾಳುಗಳು ಕಣದಲ್ಲಿದ್ದಾರೆ. 50,25,941 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

ಬೆಳಗಿನ ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ಮತದಾರರು ಮತಗಟ್ಟೆಗಳ ಬಳಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಬೆಳಗ್ಗೆ ಕಂಡುಬಂದಿತು. ಬಿಸಿಲೇರುತ್ತಿದ್ದಂತೆ ಮತದಾನ ಬಿರುಸುಗೊಂಡಿತು. ರಾಜ್ಯದಾದ್ಯಂತ 7,252 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 37,605 ಚುನಾವಣಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ 17,850 ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್‍ಗಳು ಹಾಗೂ ಕೇಂದ್ರೀಯ ಅರೆ ಸೇನಾ ಪಡೆಯ 65 ತುಕಡಿಗಳನ್ನು ನಿಯೋಜಿಸಲಾಗಿದೆ.

ವೀರಭದ್ರ ಸಿಂಗ್, 10 ಸಚಿವರು, ಶಾಸಕರು, ಎಂಟು ಮುಖ್ಯ ಸಂಸದೀಯ ಕಾರ್ಯದರ್ಶಿಗಳು, ಡೆಪ್ಯೂಟಿ ಸ್ಪೀಕರ್ ಜಗತ್ ಸಿಂಗ್ ನೇಗಿ, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್, ಮಾಜಿ ಸಚಿವರು ಹಾಗೂ ಮಾಜಿ ಶಾಸಕರ ಹಣೆಬರಹ ಇಂದು ನಿರ್ಧಾರವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬಿಎಸ್‍ಪಿ 42, ಸಿಪಿಐ(ಎಂ) 14, ಸ್ವಾಭಿಮಾನ್ ಪಾರ್ಟಿ ಮತ್ತು ಲೋಕ್ ಘಟಬಂಧನ್ ಪಾರ್ಟಿ ತಲಾ ಆರು ಹಾಗೂ ಸಿಪಿಐ-3 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ.  ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲು 40 ದಿನಗಳು ಕಾಯಬೇಕಾಗುತ್ತದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

Facebook Comments

Sri Raghav

Admin