ಗುಜರಾತ್ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ರಾಜ್ಯದ ಪಕ್ಷಾಂತರಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Pakshantara--02

ಬೆಂಗಳೂರು, ನ.10- ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದರೂ ಇನ್ನೂ ಸುಮಾರು 20 ಮಂದಿ ವಿವಿಧ ರಾಜಕೀಯ ಪಕ್ಷಗಳ ಶಾಸಕರು ಗುಜರಾತ್ ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಶಾಸಕರು, ಮಾಜಿ ಶಾಸಕರು ಪಕ್ಷಾಂತರಗೊಳ್ಳಲು ಅಣಿಯಾಗುತ್ತಿದ್ದಾರೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷದತ್ತ ಹೆಚ್ಚು ವಾಲುತ್ತಾರೆ ಎಂಬ ಬಗ್ಗೆ ಪಕ್ಷಾಂತರಗೊಳ್ಳುವ ರಾಜಕೀಯ ಮುಖಂಡರ ನಡುವೆಯೇ ಗೊಂದಲವಿದೆ.

ಗುಜರಾತ್ ಚುನಾವಣಾ ಫಲಿತಾಂಶ ಬಿಜೆಪಿಗೆ ವರವಾದರೆ, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಕಂಡುಬರುತ್ತದೆ. ಆಗ ಬಿಜೆಪಿಗೆ ಪಕ್ಷಾಂತರಗೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರವನ್ನು ಮಾಡತೊಡಗಿದ್ದಾರೆ. ಒಂದು ವೇಳೆ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಇತರೆ ಪಕ್ಷಗಳತ್ತ ಪಕ್ಷಾಂತರಗೊಳ್ಳುವ ರಾಜಕಾರಣಿಗಳು ಮುಖ ಮಾಡಲಿದ್ದಾರೆ. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ವರಿಷ್ಠರೊಡನೆ ಮಾತುಕತೆ ನಡೆಸಿರುವ ರಾಜಕೀಯ ಮುಖಂಡರು ಜನವರಿವರೆಗೂ ಕಾಲಾವಕಾಶ ಕೋರಿದ್ದಾರೆ. ಡಿಸೆಂಬರ್‍ನಲ್ಲಿ ಗುಜರಾತ್ ಚುನಾವಣೆ ನಡೆದು ಫಲಿತಾಂಶ ಹೊರಬೀಳಲಿದೆ. ಅಂದರೆ ಹೊಸ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ರಾಜ್ಯದ ರಾಜಕೀಯದಲ್ಲಿ ಪಕ್ಷಾಂತರ ಪ್ರಕ್ರಿಯೆ ನಡೆಯಲಿದೆ.

ಹಳೆ ಮೈಸೂರು ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ರಾಜಕೀಯ ಮುಖಂಡರು ಪಕ್ಷಾಂತರಗೊಳ್ಳುವ ನಿರೀಕ್ಷೆಯಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರಗೊಳ್ಳುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಸುಮಾರು 20 ಮಂದಿ ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದೆ.

ಈಗಾಗಲೇ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಬಿಎಸ್‍ಆರ್ ಕಾಂಗ್ರೆಸ್‍ನ ಶಾಸಕ ಪಿ.ರಾಜೀವ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ಸಿ.ಎಚ್.ವಿಜಯ್‍ಶಂಕರ್ ಬಿಜೆಪಿ ತೊರೆದಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಮತ್ತೊಬ್ಬ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಈಗಾಗಲೇ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‍ನಿಂದ ಉಚ್ಚಾಟನೆಗೊಂಡಿರುವ ಎ.ಎಸ್.ಪಾಟೀಲ್ ನಡಹಳ್ಳಿ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ.  ಅಂದರೆ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ನಡುವೆ ಪಕ್ಷಾಂತರ ಪ್ರಕ್ರಿಯೆ ನಡೆಯಲಿದೆ.

Facebook Comments

Sri Raghav

Admin