ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆಯೇ ದೊಡ್ಡಣ್ಣ ಡೊನಾಲ್ಡ್ ಟ್ರಂಪ್…!?

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ನ.10-ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಕುಸಿಯುತ್ತಿದೆಯೇ..? ವಿವಾದಾತ್ಮಕ ಅತ್ಯಂತ ಶ್ರೀಮಂತ ಉದ್ಯಮಿಯೂ ಆದ ವರ್ಣರಂಜಿತ ಟ್ರಂಪ್ ಅಧಿಕಾರಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ. ಆಗಲೇ ಅವರ ಜನಪ್ರಿಯತೆ ಕುಸಿಯ ತೊಡಗಿರುವುದು ಅಮೆರಿಕದ ಕನ್ಸರ್‍ವೇಟಿವ್ ಪಕ್ಷವನ್ನು ಚಿಂತೆಗೀಡುಮಾಡಿದೆ.

ಟ್ರಂಪ್ ವಿರುದ್ಧ ಅಮೆರಿಕದ ಗ್ರಾಮಾಂತರ ಸಮುದಾಯಗಳಲ್ಲಿ ಈಗಾಗಲೇ ಅವರ ಜನಪ್ರಿಯತೆ ಕುಗ್ಗಿರುವ ಬೆನ್ನಲ್ಲೇ, ನಗರ ಪ್ರದೇಶಗಳಲ್ಲೂ ಅವರ ಆಡಳಿತ ವೈಖರಿ ಮತ್ತು ದುಡುಕಿನ ನಿರ್ಧಾರಗಳ ಬಗ್ಗೆ ಶೇ.47 ಮಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಕೆಲವು ಪ್ರಮುಖ ದಿನಪ್ರತಿಕೆಗಳು ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

ಅಕ್ಟೋಬರ್‍ನಲ್ಲಿ ಬೃಹನ್ನಗರವಲ್ಲದ ಪ್ರದೇಶಗಳಲ್ಲಿ ವಾಸಿಸುತ್ತಿರುವ 15,000 ಪ್ರೌಢರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಶೇ.45ರಷ್ಟು ಮಂದಿ ಟ್ರಂಪ್ ವಿರುದ್ಧ ಹೆಬ್ಬೆರಳು ತಲೆಕೆಳಗೆ ಮಾಡಿದ್ದಾರೆ. ಇದೇ ರೀತಿಯ ಪ್ರತಿಕ್ರಿಯೆಗಳು ಅಮೆರಿಕದ ಇತರ ಮಹಾನಗರಗಳಲ್ಲೂ ವ್ಯಕ್ತವಾಗಿವೆ. ಟ್ರಂಪ್ ಜನಪ್ರಿಯತೆ ಕುಗ್ಗಲು ಕಾರಣವೇನು? ಮೊದಲಿನಿಂದಲೂ ವಿವಾದದ ಕೇಂದ್ರ ಬಿಂದುವಾಗಿರುವ ಟ್ರಂಪ್ ತಮ್ಮ ಪೂರ್ವಾಶ್ರಮದಲ್ಲಿ ಸ್ತ್ರೀಲಂಪಟತನ ವಿವಾದಗಳಿಗೂ ಗುರಿಯಾಗಿದ್ದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೆಕ್ಸಿಕೋ ವಲಸಿಗರನ್ನು ತಡೆಗಟ್ಟಲು ಗಡಿ ಗೋಡೆ ನಿರ್ಮಿಸುವುದಾಗಿ ಹೇಳಿ ಅಮೆರಿಕ ಮೂಲದ ಮೆಕ್ಸಿಕನ್ನರ ವಿರೋಧ ಕಟ್ಟಿಕೊಂಡಿದ್ದರು.

ಅಲ್ಲದೆ, ಇದಕ್ಕೆ ಪ್ರಮುಖ ಕಾರಣವೆಂದರೆ ಟ್ರಂಪ್ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದರೂ ಒಂದೇ ಒಂದು ಸಮಾಜ ಪರವಾದ, ಜನಹಿತದ ನಿರ್ಧಾರ ತೆಗೆದುಕೊಳ್ಳದಿರುವುದು ಎನ್ನಲಾಗುತ್ತಿದೆ. ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಅವರು ಕೈಗೊಂಡ ಕೆಲವು ನಿರ್ಧಾರಗಳು ಅಮೆರಿಕನ್ನರೂ ಸೇರಿದಂತೆ ವಿದೇಶಗಳ ನಾಗರಿಕನ್ನು ಕಂಗೆಡಿಸಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ, ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಭೇಟಿ ನಿರ್ಬಂಧ, ಕಠಿಣ ವೀಸಾ ನೀತಿ, ನಿಷ್ಠಾವಂತ ಉನ್ನತಾಧಿಕಾರಿಗಳ ಎತ್ತಂಗಡಿ, ನ್ಯಾಯಮೂರ್ತಿಗಳ ವಜಾ, ವಲಸೆ ನೀತಿ, ಒಬಾಮ ಹೆಲ್ತ್ ಕೇರ್ ಯೋಜನೆ ರದ್ದು, ಆಡಳಿತ ನಿರ್ವಹಣೆಗೆ ಸಂಬಂಧಪಟ್ಟ ಏಕಪಕ್ಷೀಯ ಹಠಾತ್ ನಿರ್ಧಾರ-ಇವೇ ಮೊದಲಾದ ವಿವಾದಾತ್ಮಕ ನಿರ್ಧಾರಗಳು ಟ್ರಂಪ್ ಜನಪ್ರಿಯತೆ ಹಳ್ಳ ಹಿಡಿಯುವಂತೆ ಮಾಡಿವೆ ಎಂದು ವಿಶ್ಲೇಷಿಸಲಾಗಿದೆ.

ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಅವರ ವಿರುದ್ಧ ಅರ್ಧದಷ್ಟು ಅಮೆರಿಕನ್ನರು ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಚುನಾವಣಾ ರ್ಯಾಲಿಗಳಲ್ಲೂ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಅವರು ಅಧಿಕಾರ ವಹಿಸಿಕೊಂಡ ಈ ವರ್ಷದ ಜನವರಿ 20ರ ನಂತರ ಕೆಲವೆಡೆ ಅವರ ವಿರುದ್ಧ ಹಿಂಸಾತ್ಮಕ ಹರತಾಳಗಳು ನಡೆದು ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಉಂಟಾಗಿತ್ತು.  100 ದಿನಗಳ ಯಶಸ್ವಿ ಆಡಳಿತ ಪೂರೈಸಿದ ಸಂದರ್ಭದಲ್ಲೂ ಟ್ರಂಪ್ ಜನಪ್ರಿಯತೆ ಕುಗ್ಗುತ್ತಿದೆ ಎಂದು ಮಾದ್ಯಮಗಳು ವಿಶ್ಲೇಷಿಸಿದ್ದವು.

Facebook Comments

Sri Raghav

Admin