ಥಿಯೇಟರ್ಗೆ ಬಂದ ಕಾಲೇಜ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ck-mov
ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಹಳ ಅಚ್ಚುಕಟ್ಟಾಗಿ ಸಿದ್ಧವಾಗಿರುವ ಚಿತ್ರ ಕಾಲೇಜ್ ಕುಮಾರ್. ಈ ಚಿತ್ರವು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಈ ಚಿತ್ರದ ಹಾಡುಗಳು, ಟ್ರೈಲರ್‍ಅನ್ನು ಮುತ್ತಪ್ಪ ರೈ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎಂಆರ್ ಪಿಕ್ಚರ್ಸ್ ಮೂಲಕ ಸಿದ್ಧವಾಗಿರುವ ಈ ಚಿತ್ರವನ್ನು ಎಲ್.ಪದ್ಮನಾಭ್ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಇವರು ಜಾನ್ ಜಾನಿ ಜನಾರ್ದನ್ ಚಿತ್ರ ನಿರ್ಮಿಸಿದ್ದು, ಇದು ಅವರ ಎರಡನೆ ಚಿತ್ರವಾಗಿದೆ. ಈ ಚಿತ್ರವನ್ನು ಅಲೆಮಾರಿ ಚಿತ್ರ ನಿರ್ದೇಶಕ ಸಂತು ನಿರ್ದೇಶನ ಮಾಡಿದ್ದು, ಈ ಚಿತ್ರದ ಮೂಲಕ ತಮ್ಮ ಹೆಸರನ್ನು ಹರಿ ಸಂತೋಷ್ ಎಂದು ಬದಲಾಯಿಸಿಕೊಂಡಿದ್ದಾರೆ. ಬಹುತೇಕ ಕಾಲೇಜು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ ನಿರ್ಮಾಣವಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಹೇಗೆಲ್ಲ ಹಾದಿ ತಪ್ಪುತ್ತಾರೆ, ಅದರಿಂದ ತಂದೆ-ತಾಯಿಗಳು ಅನುಭವಿಸುವ ಕಷ್ಟ, ನೋವುಗಳನ್ನು ಬಹಳ ಸೂಕ್ಷ್ಮವಾಗಿ ತೆರೆ ಮೇಲೆ ತೆರೆದಿಡುವ ಪ್ರಯತ್ನ ಮಾಡಿದ್ದಾರಂತೆ.

ಕಾಲೇಜ್ ಕುಮಾರ್‍ನಿಗೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದು, ಒಂದೊಂದು ಹಾಡನ್ನು ಕೂಡ ಬಹಳ ವಿಭಿನ್ನವಾಗಿ ಕಂಪೋಸ್ ಮಾಡಿದ್ದಾರಂತೆ.ಈ ಚಿತ್ರವನ್ನು ತಂದೆ-ತಾಯಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ತಪ್ಪದೆ ನೋಡಬೇಕು ಎನ್ನುತ್ತದೆ ಚಿತ್ರತಂಡ.ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಶೃತಿ ನಾಯಕನ ತಾಯಿಯಾಗಿ ಅಭಿನಯಿಸಿದ್ದಾರೆ. ಹಾಗೆ ನಟ ರವಿಶಂಕರ್ ಕೂಡ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಗನನ್ನು ಪ್ರೀತಿಸುವ ಮುದ್ದಿನ ಅಪ್ಪನಾಗಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಕೆಂಡ ಸಂಪಿಗೆ ಚಿತ್ರದ ನಾಯಕ ವಿಕ್ಕಿ ವಿದ್ಯಾರ್ಥಿಯಾಗಿ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ನಾಯಕಿ ಸಂಯುಕ್ತ ಹೆಗಡೆ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರನ್ನು ಸೆಳೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಾರೆ ಒಂದು ರೊಮ್ಯಾಂಟಿಕ್, ಕಾಮಿಡಿ ಫ್ಯಾಮಿಲಿ ಡ್ರಾಮಾ ಚಿತ್ರವು ಪ್ರೇಕ್ಷಕರ ಮುಂದೆ ಬರುತ್ತಿದೆ. ಉಳಿದಂತೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಮೈಸೂರು ಟಾಕೀಸ್‍ನ ಜಾಕ್ ಮಂಜು ಮೂಲಕ ಬಿಡುಗಡೆಯಾಗುತ್ತಿರುವ ಕಾಲೇಜ್ ಕುಮಾರ್‍ನ ಕಮಾಲ್ ಯಾವ ರೀತಿ ಇರಲಿದೆ ಎಂಬುದನ್ನು ಬೆಳ್ಳಿ ಪರದೆ ಮೇಲೆ ನೋಡಬೇಕಿದೆ.

Facebook Comments

Sri Raghav

Admin