ರಾಗಾಲಾಪನೆಯಲ್ಲಿ ‘ಜನ ಗಣ ಮನ’ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

jana

ಮಹಿಳಾ ಸಾಹಸ ಪ್ರಧಾನ ಚಿತ್ರಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ನಟಿ ಮಾಲಾಶ್ರೀ ಅವರ ನಂತರ ಲೇಡಿ ಬ್ರೂಸ್ಲಿ ಎಂದೇ ಹೆಸರು ಗಳಿಸಿರುವ ನಟಿ ಆಯಿಷಾ ಅಭಿನಯದ ಜನ ಗಣ ಮನ ಚಿತ್ರವು ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಚಿತ್ರದ ಹಾಡುಗಳನ್ನು ಹೊರತಂದಿದೆ. ರೇಣುಕಾಂಬಾ ಥಿಯೇಟರ್‍ನಲ್ಲಿ ನಡೆದ ಈ ಚಿತ್ರದ ಹಾಡುಗಳ ಸಿಡಿ ಅನಾವರಣ ಸಮಾರಂಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಎನ್.ಎಂ ಸುರೇಶ್, ಶೈಲೇಂದ್ರ ಬಾಬು, ನಿರ್ಮಾಪಕರ ಸಂಘದ ಜಂಟಿ ಕಾರ್ಯದರ್ಶಿ ಪ್ರವೀಣ್‍ಕುಮಾರ್, ಕೆ.ವಿ. ನಾಗೇಶ್‍ಕುಮಾರ್, ವಾಣಿಜ್ಯ ಮಂಡಳಿ ಖಜಾಂಚಿ ರಾಜೇಂದ್ರ, ನರಸಿಂಹಲು, ಹಿರಿಯ ನಿರ್ದೇಶಕ ಆನಂದ ಪಿ.ರಾಜು, ಹೆಚ್.ವಾಸು ಸೇರಿದಂತೆ ಕನ್ನಡ ಚಿತ್ರರಂಗದ ಚಿತ್ರರಂಗ ಹಲವು ಗಣ್ಯರು ಹಾಜರಿದ್ದರು. ಈ ಚಿತ್ರದ ಹಾಡುಗಳ ಜೊತೆಗೆ ವೀಡಿಯೋ ಸಾಂಗ್, ಟೀಸರ್ ಮತ್ತು ಟ್ರೇಲರ್‍ಗಳನ್ನು ಕೂಡ ಚಿತ್ರತಂಡ ಹೊರತಂದಿದೆ.

ಆಡಿಯೋ ಬಿಡುಗಡೆಯ ಬಳಿಕ ಮಾತನಾಡಿದ ಸಾ.ರಾ. ಗೋವಿಂದು ಅವರು ಚಿತ್ರದ ಟ್ರೇಲರ್‍ಗಳು ಭರವಸೆ ಹುಟ್ಟಿಸುವಂತಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಪಡೆದವರಿಂದ ಈ ಚಿತ್ರ ನಿರ್ಮಾಣವಾಗಿದ್ದು, ಜನಕ್ಕೆ ಇಷ್ಟವಾಗಲಿದೆ. ಜನ ಗಣ ಮನ ಚಿತ್ರ ಶತದಿನೋತ್ಸವವನ್ನು ಆಚರಿಸಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಶಶಿಕಾಂತ್ ಮಾತನಾಡಿ, ಇಂದು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ, ಸಮಾಜಕ್ಕೆ ಕಂಟಕವಾಗಿರುವ ವಿಷಯಗಳು ಮತ್ತು ವ್ಯಕ್ತಿಗಳ ಸುತ್ತ ಈ ಚಿತ್ರ ಸಾಗುತ್ತದೆ. ಹೆಣ್ಣು ಮಗಳೊಬ್ಬಳು ಹೇಗೆ ವಿರೋಧಿಗಳನ್ನು, ದುಷ್ಟರನ್ನು ಸದೆಬಡಿಯುತ್ತಾಳೆ ಎಂಬುದು ಚಿತ್ರದ ಕಥಾನಕ. ಎಂಟರ್‍ಟೈನ್ಮೆಂಟ್ ಜೊತೆಗೆ ಒಂದು ಮೆಸೇಜ್ ಕೂಡ ಚಿತ್ರದಲ್ಲಿದೆ ಎಂದರು. ಚಿತ್ರದಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡಿದ ನಟಿ ಆಯಿಷಾ, ಸುಮಾರು ಎರಡು ವರ್ಷಗಳ ಗ್ಯಾಪ್ ಬಳಿಕ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಸಮಾಜ ದ್ರೋಹಿಗಳನ್ನು ಮಟ್ಟ ಹಾಕುವ ಲೇಡಿ ಪೊಲೀಸ್ ಆಫೀಸರ್ ಪಾತ್ರ ನನ್ನದು. ಇಡೀ ಸಿನಿಮಾದಲ್ಲಿ ಆ್ಯಕ್ಷನ್, ಸೆಂಟಿಮೆಂಟ್, ಮೆಸೇಜ್ ಎಲ್ಲವೂ ಇದೆ. ನಮಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂದರು.

ವಿಐಪಿ ಸಿನಿಮಾಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಪಕ ಪಿ.ಸಾಂಬಶಿವ ರೆಡ್ಡಿ ನಿರ್ಮಿಸುತ್ತಿರುವ ಜನ ಗಣ ಮನ ಚಿತ್ರಕ್ಕೆ ತೆಲುಗಿನ ಕೋರಾ ನಾಗೇಶ್ವರ ರಾವ್ ಕಥೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಸಿ.ಹೆಚ್.ರಾಮಕೃಷ್ಣ ಸಹ ನಿರ್ಮಾಪಕರಾಗಿದ್ದಾರೆ. ಇಲ್ಲಿಯವರೆಗೆ ಆನಂದ ಪಿ.ರಾಜು, ಹೆಚ್.ವಾಸ್ ಸೇರಿದಂತೆ ಕನ್ನಡದ ಹಲವು ಹಿರಿಯ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದ ಶಶಿಕಾಂತ್ ಆನೇಕಲ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು, ಆ್ಯಕ್ಷನ್-ಕಟ್ ಹೇಳುವ ಮೂಲಕ ಪ್ರಥಮ ಬಾರಿಗೆ ಪೂರ್ಣಪ್ರಮಾಣದ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಪ್ರಮುಖವಾಗಿ ಎರಡು ಹಾಡುಗಳಿದ್ದು, ಸಂಗೀತ ನಿರ್ದೇಶಕಕ ಗೌತಮ್ ಶ್ರೀವತ್ಸ ಚಿತ್ರಕ್ಕೆ ಸಂಗೀತ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಕಂಪೆನಿ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದು, ಹಾಡುಗಳನ್ನು ಮಾರುಕಟ್ಟೆಗೆ ತರುತ್ತಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

Facebook Comments

Sri Raghav

Admin