ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕುರ್ಚಿಗೆ ಕಂಟಕ..?

ಈ ಸುದ್ದಿಯನ್ನು ಶೇರ್ ಮಾಡಿ

Venugopal--02

ಬೆಂಗಳೂರು, ನ.10-ಕೇರಳದಲ್ಲಿ ನಡೆದ ಬಹುಕೋಟಿ ಸೋಲಾರ್ ಹಗರಣದ ನ್ಯಾಯಾಂಗ ತನಿಖಾ ವರದಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಹೆಸರು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕುತ್ತು ಬರಲಿದೆಯೇ… ಅವರನ್ನು ಬದಲಿಸಿ ಬೇರೆಯವರನ್ನು ನೇಮಕ ಮಾಡಲಾಗುತ್ತದೆಯೇ… ಅಂತಹ ಮಾತುಗಳು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿ ಕೇಳಿಬರುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ ಅವರ ಮೇಲೆ ಅವ್ಯವಹಾರ, ಅತ್ಯಾಚಾರ, ಲೈಂಗಿಕ ದುರ್ಬಳಕೆ ಸೇರಿದಂತೆ ಗಂಭೀರ ಆರೋಪಗಳನ್ನು ಸರಿತಾ ನಾಯರ್ ಮಾಡಿರುವ ಆರೋಪದ ಪತ್ರವನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ರಾಜ್ಯ ಚುನಾವಣೆ ಉಸ್ತುವಾರಿ ಹೊತ್ತಿರುವ ಕೆ.ಸಿ.ವೇಣುಗೋಪಾಲ್ ಅವರ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಮೇಲೆ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್‍ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಗಂಭೀರ ಆರೋಪ ಕೇಳಿಬಂದಿದ್ದು, ಪ್ರತಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಲಿದೆ. ಹಾಗಾಗಿ ಇವರನ್ನು ಬದಲಿಸಿ ಹೈಕಮಾಂಡ್ ಬೇರೆಯವರನ್ನು ನೇಮಕ ಮಾಡುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ನಾಲ್ಕೈದು ತಿಂಗಳಲ್ಲಿ ಚುನಾವಣೆ ಎದುರಾಗುತ್ತದೆ. ಈಗಾಗಲೇ ಬಿಜೆಪಿ, ಜೆಡಿಎಸ್ ಚುನಾವಣಾ ಸಂಬಂಧ ಯಾತ್ರೆಗಳನ್ನು ನಡೆಸುತ್ತಿವೆ. ಕಾಂಗ್ರೆಸ್ ಪಕ್ಷ ಕೂಡ ಯಾತ್ರೆಗೆ ಸಜ್ಜಾಗುತ್ತಿದೆ. ಮನೆ ಮನೆಗೆ ಕಾಂಗ್ರೆಸ್ ಎಂಬ ವಿನೂತನ ಅಭಿಯಾನವನ್ನು ಕೂಡ ಕೈಗೊಂಡಿದೆ. ಈ ಸಂದರ್ಭದಲ್ಲಿ ಉಸ್ತುವಾರಿಯವರ ಮೇಲೆ ಇಂತಹ ಗುರುತರ ಆರೋಪ ಕೇಳಿಬಂದಿದೆ. ಈ ಹಿಂದೆಯೇ ಈ ಆರೋಪ ಕೇಳಿಬಂದಾಗ ಇದನ್ನು ವೇಣುಗೋಪಾಲ್ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದರು. ಆದರೆ, ಈ ಪ್ರಕರಣದ ತನಿಖೆ ನಡೆಸುತ್ತಿದ್ದ ನ್ಯಾಯಾಂಗ ತನಿಖಾ ಸಮಿತಿ ವರದಿ ನೀಡಿದ್ದು, ಆ ವರದಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರ ಹೆಸರು ಉಲ್ಲೇಖವಾಗಿರುವುದು ರಾಜ್ಯ ಕಾಂಗ್ರೆಸ್‍ಗೆ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ.

ರಾಜಕೀಯ ಕಾರಣಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ನ್ಯಾಯಾಂಗ ವರದಿಯಲ್ಲಿ ನನ್ನ ಮೇಲೆ ಯಾವುದೇ ಆಪಾದನೆಗಳಿಲ್ಲ. ಸರಿತಾ ನಾಯರ್ ಅವರು ಬರೆದಿರುವ ಪತ್ರದ ಆಧಾರದ ಮೇಲೆ ಆರೋಪ ಮಾಡಲಾಗಿದೆ. ಕ್ರಿಮಿನಲ್ ಹಿನ್ನೆಲೆಯಿರುವ ಸರಿತಾ ಈಗಾಗಲೇ ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದಾರೆ. ಅವರ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರಾದರೂ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೈಗೆ ಈ ವಿಷಯ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.  ಕೆ.ಸಿ.ವೇಣುಗೋಪಾಲ್ ಅವರು ತಮ್ಮ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆ ಕೊಟ್ಟು ತೆರಳಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin