ವೇಣುಗೋಪಾಲ್ ರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಶೆಟ್ಟರ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Jagadish-Shettar-01

ಬೆಂಗಳೂರು, ನ.10-ಸೋಲಾರ್ ವಿದ್ಯುತ್ ಹಗರಣ ಹಾಗೂ ಮಹಿಳೆ ಮೇಲೆ ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್‍ಶೆಟ್ಟರ್  ಕಾಂಗ್ರೆಸ್ ವರಿಷ್ಠರಿಗೆ  ಒತ್ತಾಯಿಸಿದ್ದಾರೆ. ನಿನ್ನೆಯಷ್ಟೆ ಕೇರಳ ವಿಧಾನಸಭೆಯಲ್ಲಿ ನ್ಯಾಯಮೂರ್ತಿ ಕೆ.ಶಿವರಂಜನ್ ತನಿಖಾ ಆಯೋಗದ ವರದಿಯನ್ನು ಮಂಡಿಸಲಾಗಿದೆ. ಇದರಲ್ಲಿ ಕೆ.ಸಿ.ವೇಣುಗೋಪಾಲ್ ಕೂಡ ಆರೋಪಿಯಾಗಿರುವುದರಿಂದ ಕರ್ನಾಟಕದಲ್ಲಿ ಯಾವ ನೈತಿಕತೆ ಮೇಲೆ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅತ್ಯಾಚಾರಿಗಳು, ಜೈಲಿಗೆ ಹೋಗಿ ಬಂದವರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲಾ ಅಪಪ್ರಚಾರ ಮಾಡುತ್ತಾರೆ. ಸ್ವತಃ ನಿಮ್ಮ ಪಕ್ಷದ ಉಸ್ತುವಾರಿಗಳೇ ಅತ್ಯಾಚಾರದಲ್ಲಿ ಭಾಗಿಯಾಗಿರುವುದರಿಂದ ನಿಮಗೆ ಇನ್ನೊಬ್ಬರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು, ಇಲ್ಲದಿದ್ದರೆ ಕರ್ನಾಟಕಕ್ಕೆ ವೇಣುಗೋಪಾಲ್ ಬಂದ ವೇಳೆ ಅವರ ವಿರುದ್ಧ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಜತೆಗೆ ರಾಜ್ಯದ ಜನತೆಯು ಇಂಥವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದರು.

ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಯಾವ ರೀತಿ ಪಕ್ಷಕ್ಕೆ ಸಲಹೆ ಸೂಚನೆ ಕೊಡುತ್ತಾರೆ ಎಂಬುದು ತಿಳಿದಿಲ್ಲ. ಕಾಂಗ್ರೆಸ್ ನಾಯಕರಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ವೇಣುಗೋಪಾಲ್ ಅವರನ್ನು ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಅವರು ಬಂದ ಕಡೆಯಲ್ಲೆಲ್ಲಾ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾರ್ಜ್ ರಾಜೀನಾಮೆ ನೀಡಲೇಬೇಕು:

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೋಮವಾರ ಆರಂಭವಾಗಲಿರುವ ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಉಭಯ ಸದನಗಳಲ್ಲೂ ಉಗ್ರ ಹೋರಾಟ ಮಾಡುವುದಾಗಿ ಶೆಟ್ಟರ್ ಹೇಳಿದರು. ಈ ಹಿಂದೆ ಜಾರ್ಜ್ ವಿರುದ್ಧ ಮಡಿಕೇರಿ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಾಗುತ್ತಿದ್ದಂತೆ ರಾಜೀನಾಮೆ ನೀಡಿದ್ದರು. ಸಿಬಿಐ ತನಿಖಾಧಿಕಾರಿಗಳ ತಂಡ ಇವರನ್ನೇ ಮೊದಲ ಆರೋಪಿಯಾಗಿಸಿದ್ದರೂ ಇನ್ನೂ ಸಚಿವರಾಗಿ ಮುಂದುವರೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸಬೇಕು, ಜಾರ್ಜ್ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಕೆಲವು ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಸಿದ್ದರಾಮಯ್ಯ ಅವರು ಈಗಲಾದರೂ ಅವರ ರಕ್ಷಣೆಗೆ ನಿಲ್ಲದೆ ರಾಜೀನಾಮೆ ಪಡೆಯಬೇಕು. ಅಧಿವೇಶನ ಸುಸೂತ್ರವಾಗಿ ನಡೆಯಬೇಕೆಂದಿದ್ದರೆ ಜಾರ್ಜ್ ಅವರಿಂದ ರಾಜೀನಾಮೆ ಪಡೆಯಲೇಬೇಕು. ಇಲ್ಲದಿದ್ದರೆ ಸಂಪುಟದಿಂದ ಕಿತ್ತು ಹಾಕಿ ಎಂದು ಒತ್ತಾಯಿಸಿದರು.

ಜಯಂತಿಗೆ ಬಹಿಷ್ಕಾರ:

ರಾಜ್ಯ ಸರ್ಕಾರ ಕೆಲವರ ವಿರೋಧದ ನಡುವೆಯೂ ಹಿಂದೂ ವಿರೋಧಿ ಮತಾಂಧ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿರುವುದು ಸರಿಯಲ್ಲ. ಹಲವು ಸಂಘಟನೆಗಳು ಹಾಗೂ ರಾಜ್ಯದ ಜನತೆ ಇದನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಕೇವಲ ವೋಟ್‍ಬ್ಯಾಂಕ್ ರಾಜಕಾರಣಕ್ಕಾಗಿ ಸರ್ಕಾರ ಈ ಜಯಂತಿಯನ್ನು ಹಮ್ಮಿಕೊಂಡಿದೆ ಎಂದು ಟೀಕಿಸಿದರು. ಸಂಜೆ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿರುವುದರಿಂದ ನಮ್ಮ ಪಕ್ಷದ ನಿಲುವು ಸ್ಪಷ್ಟ ಎಂದು ಹೇಳಿದರು.

Facebook Comments

Sri Raghav

Admin