ಸಿದ್ದರಾಮಯ್ಯ ಮತ್ತು ನನ್ನನು ಬೇರೆ ಮಾಡಲು ಸಾಧ್ಯವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ನ.10- ಆಕಾಶಕ್ಕೆ ಹಾರಿ ತಲೆಕೆಳಗಾಗಿ ಬಿದ್ದರೂ ನನ್ನನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇರೆ ಮಾಡಲು ಸಾಧ್ಯವಿಲ್ಲ. ನಾವಿಬ್ಬರೂ ಒಟ್ಟಾಗಿದ್ದೇವೆ. ಒಟ್ಟಾಗಿಯೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒತ್ತಿ ಹೇಳಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಶೀರ್ವಾದ ರ್ಯಾಲಿಯ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಸದ್ಯಕ್ಕೆ ಪಕ್ಷದ ವತಿಯಿಂದ ಚುನಾವಣೆಯ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಬಿಜೆಪಿಯವರಂತೆ ಯಾವುದೇ ರ್ಯಾಲಿ ಮಾಡುವ ಉದ್ದೇಶವಿಲ್ಲ. ಜೆಡಿಎಸ್-ಬಿಜೆಪಿ ಪಕ್ಷಕ್ಕಿಂತಲೂ ಕಾಂಗ್ರೆಸ್ ಭಿನ್ನವಾದ ರಣತಂತ್ರವನ್ನು ರೂಪಿಸಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಹೊಂದಾಣಿಕೆ ಚೆನ್ನಾಗಿದೆ. ಪಕ್ಷದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಿಎಂ ಭಾಗವಹಿಸುತ್ತಿದ್ದಾರೆ. ಸರ್ಕಾರದವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ನಾನು ಅಧ್ಯಕ್ಷನಾಗಿ ಭಾಗವಹಿಸುತ್ತಿಲ್ಲ. ಮುಂದೆಯೂ ಭಾಗವಹಿಸುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮ ನಡೆದರೆ ವಿಧಾನಪರಿಷತ್ ಸದಸ್ಯನಾಗಿ ಭಾಗವಹಿಸುತ್ತೇನೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ಕಾರಣಕ್ಕೆ ನನ್ನ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ಸರಿಯಲ್ಲ. ನಾವು ಜತೆಯಾಗಿಯೇ ಇರುತ್ತೇವೆ. ಒಂದು ವೇಳೆ ಮುಖ್ಯಮಂತ್ರಿಗಳು ಹೇಳುವಂತೆ ಜನಾಶೀರ್ವಾದ ರ್ಯಾಲಿ ನಡೆದಿದ್ದೇ ಆದರೆ ಅದನ್ನು ಪಕ್ಷ ಆಯೋಜಿಸಬೇಕೇ ಅಥವಾ ಸರ್ಕಾರ ಆಯೋಜಿಸಲಿದೆಯೇ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ ಎಂದರು.

ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಮೇಲಿನ ಅತ್ಯಾಚಾರ ಆರೋಪ ಆಧಾರ ರಹಿತವಾಗಿದೆ. ಆರೋಪ ಮಾಡಿರುವ ಮಹಿಳೆ ಮೇಲೆ ಕೇರಳದ ವಿವಿಧ ಪೆÇಲೀಸ್ ಠಾಣೆಗಳಲ್ಲಿ 32ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಆಕೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದು ರಾಜಕೀಯ ಪ್ರೇರಿತ ಪ್ರಕರಣ. ನ್ಯಾಯಾಲಯ ರಾಜಕೀಯ ಗಿಮಿಕ್ಕಿನ ಪ್ರಕರಣಗಳ ವಿಚಾರಣೆಗೆ ವೇದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಬಿಜೆಪಿಯವರ ಬಳಿ ನೂರಾರು ಹುಳುಕುಗಳಿವೆ. ಅದನ್ನು ಬಿಟ್ಟು ಯಡಿಯೂರಪ್ಪ ಅವರಂಥ ನಾಯಕರು ವೇಣುಗೋಪಾಲ್ ಅವರ ವಿರುದ್ಧ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ. ವೇಣುಗೋಪಾಲ್ ಅವರ ಮೇಲಿನ ಆರೋಪ ಸುಳ್ಳಾಗಿದೆ. ಆದರೆ ಬಿಜೆಪಿಯವರ ಮೇಲಿನ ಆರೋಪಗಳು ಜನರ ಕಣ್ಣು ಮುಂದೆಯೇ ಇವೆ ಎಂದು ಪರಮೇಶ್ವರ್ ತಿರುಗೇಟು ನೀಡಿದರು.

Facebook Comments

Sri Raghav

Admin