ಸೌದಿ ರಾಜಮನೆತನದಿಂದ 100 ಶತಕೋಟಿ ಡಾಲರ್ ಗುಳುಂ..!

ಈ ಸುದ್ದಿಯನ್ನು ಶೇರ್ ಮಾಡಿ

Soudi--02
ರಿಯಾದ್, ನ.10-ತೈಲ ಸಮೃದ್ಧ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸೌದಿ ಅರೇಬಿಯಾದ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ಭ್ರಷ್ಟಾಚಾರ ಪ್ರಕರಣಗಳು ದಿನಕ್ಕೊಂದು ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಸೌದಿ ರಾಜಮನೆತನದಲ್ಲಿ ದಶಕಗಳಿಂದ 100 ಶತಕೊಟಿ ಡಾಲರ್‍ಗಳಿಗೂ ಅಧಿಕ ಮೊತ್ತದ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಸಂಗತಿ ಬಯಲಾಗಿದ್ದು, ವಿಶ್ವವೇ ಅಚ್ಚರಿಗೊಳ್ಳುವಂತೆ ಮಾಡಿದೆ. ಸೌದಿ ಅರೇಬಿಯಾದ ಅಟಾರ್ನಿ ಜನರಲ್ ಶೇಕ್ ಸೌರ್ ಅಲ್ ಮುಜೆಬ್ ಇಂದು ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ರಾಜಮನೆತನದವರು ಮತ್ತು ರಾಜಕೀಯ ಮುಖಂಡರು ನಡೆಸಿರುವ ಭಾರೀ ಭ್ರಷ್ಟಾಚಾರದಿಂದ ದೊಡ್ಡಮಟ್ಟದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಪ್ರಭಾವಿಗಳ ಬಂಧನ: ಶತಕೋಟ್ಯಾಧಿಪತಿ ರಾಜಕುಮಾರರು, ಪ್ರಭಾವಿ ರಾಜಕಾರಣಿಗಳು, ಮತ್ತು ಉದ್ಯಮಿಗಳ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ಅಧಿಕಾರಿಗಳು ಮತ್ತಷ್ಟು ಬಿರುಸುಗೊಳಿಸಿದ್ದಾರೆ. ಬಂಧನ ಕಾರ್ಯಾಚರಣೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಭಾರೀ ಉದ್ಯಮಿಯಾಗಿರುವ ರಾಜಕುಮಾರ ಅಲ್ಪಲೀದ್ ಬಿನ್ ತಲಾಲ್, ಆಸ್ಥಾನದ ಮಾಜಿ ಮುಖ್ಯಸ್ಥ ಖಲೀದ್-ಅಲ್-ತುವೈಜ್ರಿ ಮತ್ತು ಸೌದಿ ಮಾಧ್ಯಮದ ಮೊಗುಲ್ ವಲೀದ್ ಅಲ್-ಇಬ್ರಾಹಿಂ ಸೇರಿದಂತೆ ಅನೇಕರನ್ನು ಬಂಧಿಸಿದ್ದಾರೆ. ಮತ್ತಷ್ಟು ಪ್ರಭಾವಿ ರಾಜಕೀಯ ನಾಯಕರು ಮತ್ತು ವ್ಯಾಪಾರಿ ಕುಳಗಳನ್ನು ಬಂಧಿಸಲಾಗಿದ್ದು, 1,700ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿರುವ ಅಧಿಕಾರಿಗಳು, ತಪ್ಪಿತಸ್ಥರೆಂದು ಶಂಕಿಸಲಾದ ಪ್ರಭಾವಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಇತರ ಶಂಕಿತರನ್ನು ತನಿಖಾಧಿಕಾರಿಗಳು ಸಂಪರ್ಕಿಸಿ ಅವರ ಹಣಕಾಸು ವ್ಯವಹಾರಗಳ ವಿವರಗಳನ್ನು ಕಲೆ ಹಾಕಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಈ ಸಂಬಂಧ 200ಕ್ಕೂ ಹೆಚ್ಚು ಪ್ರಭಾವಿಗಳು, ಉದ್ಯಮಿಗಳು ಮತ್ತು ರಾಜಕೀಯ ಧುರೀಣರನ್ನು ವಿಚಾರಣೆಗೊಳಪಡಿಸಲಾಗಿದ್ದು, ಮತ್ತಷ್ಟು ಭ್ರಷ್ಟಾಚಾರಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಸೌದಿ ದೊರೆ ಮಹಮದ್ ಬಿನ್ ಸಲ್ಮಾನ್ ಆದೇಶದ ಮೇಲೆ ಈಗಾಗಲೇ ರಾಜ ಕುಟುಂಬದ ಅನೇಕ ಸದಸ್ಯರು, ಹಾಲಿ ಮತ್ತು ಮಾಜಿ ಸಚಿವರು ಹಾಗೂ ಉದ್ಯಮಪತಿಗಳನ್ನು ಬಂಧಿಸಲಾಗಿದೆ. ಕಾಳಧನ, ಲಂಚ ಪಾವತಿ, ಭ್ರಷ್ಟಾಚಾರ, ಸುಲಿಗೆ ಮತ್ತು ವೈಯಕ್ತಿಕ ಲಾಭಗಳಿಗಾಗಿ ಸರ್ಕಾರಿ ಕಚೇರಿಗಳನ್ನು ದುರುಪಯೋಗ ಮಾಡಿಕೊಂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

Facebook Comments

Sri Raghav

Admin