ಹೈಡ್ರಾಮಾ, ಸಣ್ಣಪುಟ್ಟ ಗೊಂದಲಗಳ ನಡುವೆ ನಡೆದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

BBMP---01

ಬೆಂಗಳೂರು, ನ.10- ಹಲವು ನಾಟಕೀಯ ಬೆಳವಣಿಗೆಗಳು ಮತ್ತು ಸಣ್ಣಪುಟ್ಟ ಗೊಂದಲಗಳ ನಡುವೆ ಇಂದು ನಡೆದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಸುಲಲಿತವಾಗಿ ನಡೆಯಿತು.  ಪ್ರಾದೇಶಿಕ ಆಯುಕ್ತರಾದ ಜಯಂತಿ ಹಾಗೂ ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರ ನೇತೃತ್ವದಲ್ಲಿ ಬಿಬಿಎಂಪಿ ಕೌನ್ಸಿಲ್ ಹಾಲ್‍ನಲ್ಲಿ ನಡೆದ 12 ಬಿಬಿಎಂಪಿ ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಸುಸೂತ್ರವಾಗಿ ನಡೆಯಿತು.

ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ, ತೋಟಗಾರಿಕೆ, ಶಿಕ್ಷಣ, ಅಫೀಲು ಸ್ಥಾಯಿ ಸಮಿತಿ, ಆರೋಗ್ಯ ಸೇರಿದಂತೆ 12 ಸ್ಥಾಯಿ ಸಮಿತಿಗಳ ಪೈಕಿ 9 ಸ್ಥಾಯಿ ಸಮಿತಿಗಳಿಗೆ ಯಾವುದೇ ಗೊಂದಲಗಳಿಲ್ಲದೆ ಅವಿರೋಧವಾಗಿ ಸದಸ್ಯರ ಆಯ್ಕೆ ನಡೆಯಿತು. ಉಳಿದಂತೆ ನಗರ ಯೋಜನೆ ಸ್ಥಾಯಿ ಸಮಿತಿ, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ ಚುನಾವಣೆ ಸಂದರ್ಭದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು.

ನಗರ ಯೋಜನೆ ಸ್ಥಾಯಿ ಸಮಿತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನ ಹೈಕಮಾಂಡ್ ಮುಖಂಡರ ಆಣತಿಯಂತೆ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ, ಶಾಸಕ ಮುನಿರತ್ನ ಅವರ ಬೆಂಬಲಿಗ ಸದಸ್ಯರಾದ ಜಿ.ಕೆ.ವೆಂಕಟೇಶ್ ಅವರು ನಿನ್ನೆ ಮಧ್ಯಾಹ್ನ ನಾಮಪತ್ರ ಸಲ್ಲಿಸಿ ನಗರ ಯೋಜನೆ ಸ್ಥಾಯಿ ಸಮಿತಿಗೆ ತಮ್ಮ ಹಕ್ಕು ಪ್ರತಿಪಾದಿಸಿದ್ದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿತ್ತು. 11 ಜನರ ಸದಸ್ಯತ್ವದಲ್ಲಿ 13 ಜನರು ಇದ್ದರು. ಮಾತುಕತೆ ನಡೆದು ಶಿಲ್ಪ , ಅಭಿಷೇಕ್ ಮತ್ತು ಬಾಲಕೃಷ್ಣ ಎಂಬುವರ ನಾಮಪತ್ರ ವಾಪಸ್ ತೆಗೆಸಲಾಯಿತು. ಅದೇ ರೀತಿ ವಾರ್ಡ್ ಮತ್ತು ಕಾಮಗಾರಿ ಸ್ಥಾಯಿ ಸಮಿತಿಗೆ 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸದಸ್ಯ ವೇಲು ನಾಯ್ಕರ್ ಅವರ ನಾಮಪತ್ರವನ್ನು ವಾಪಸ್ ತೆಗೆಸಲಾಯಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಗೆ ಆನಂದ್‍ಕುಮಾರ್ ಅವರು ಬೇರೆ ಸ್ಥಾಯಿ ಸಮಿತಿ ಸದಸ್ಯರಾಗಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಗುಂಡಣ್ಣ ಅವರು ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಆನಂದ್‍ಕುಮಾರ್ ಅವರ ಅರ್ಜಿಯನ್ನು ಪ್ರಾದೇಶಿಕ ಆಯುಕ್ತರು ವಜಾ ಮಾಡಿದರು.  ಈ ಮೂರೂ ಸಮಿತಿಗಳಿಗೂ ಅವಿರೋಧ ಆಯ್ಕೆ ನಡೆಯಿತು. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಮಾರತ್ತಹಳ್ಳಿ ರಮೇಶ್ ಅವರಿಗೆ ಮತ್ತೆ ಅದೇ ಸಮಿತಿಗೆ ಅನುವು ಮಾಡಿಕೊಟ್ಟಿದ್ದರಿಂದ ಅವರು ಬೇಸತ್ತು ಅಳುತ್ತ ತಮ್ಮ ಚುನಾವಣಾ ನಾಮಪತ್ರ ವಾಪಸ್ ಪಡೆಯಲು ಪ್ರಾದೇಶಿಕ ಆಯುಕ್ತರ ಕುರ್ಚಿ ಬಳಿ ತೆರಳುತ್ತಿದ್ದರು. ಆಗ ಆಡಳಿತ ಪಕ್ಷದ ನಾಯಕರಾದ ರಿಜ್ವಾನ್ ಅವರು ಸಮಾಧಾನ ಮಾಡಿ ಕರೆತಂದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಥಾಯಿ ಸಮಿತಿ ಚುನಾವಣೆ ಮುಗಿಯಿತು. ನಂತರ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ನಿಗದಿತ ಅವಧಿಯಲ್ಲಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ಮಾಡದೆ ಕೆಎಂಸಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಈ ಸಂಬಂಧ ಲಿಖಿತ ಉತ್ತರ ನೀಡಬೇಕೆಂದು ಚುನಾವಣಾಧಿಕಾರಿಯಾಗಿದ್ದ ಜಯಂತಿಯವರಿಗೆ ಒತ್ತಾಯಿಸಿದರಲ್ಲದೆ ಘೋಷಣೆ ಕೂಗತೊಡಗಿದರು. ಇದಾವುದನ್ನೂ ಲೆಕ್ಕಿಸದೆ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆಗಳನ್ನು ಮುಗಿಸಿ ಸಭೆಯಿಂದ ಹೊರನಡೆದರು.

Facebook Comments

Sri Raghav

Admin