10 ದಿನದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ 25 ರಿಂದ 26 ಕೋಟಿ ರೂ. ವೆಚ್ಚ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-0004

ಬೆಂಗಳೂರು, ನ.10- ಇದೇ ನವೆಂಬರ್ 13ರಿಂದ 24ರ ವರೆಗೆ 10 ದಿನಗಳವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ 25 ರಿಂದ 26 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಇಂದಿಲ್ಲಿ ಹೇಳಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಚು-ವೆಚ್ಚಗಳ ಬಗ್ಗೆ ಸಭಾಧ್ಯಕ್ಷರು ಮತ್ತು ನಾವು ನೋಡಿಕೊಳ್ಳುತ್ತೇವೆ. ಬೆಳಗಾವಿಯಲ್ಲಿರುವ ಶಾಸಕರಿಗೆ 2500 ಭತ್ಯೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡುವ ಶಾಸಕರಿಗೆ 5000 ಭತ್ಯೆ ನೀಡಲಾಗುವುದು ಎಂದು ಹೇಳಿದರು.

ಶಾಸಕರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಅವರು ವಾಸ್ತವ್ಯ ಹೂಡಿರುವ ಕಡೆಯೇ ಭೋಜನೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ಅಗತ್ಯ ಭತ್ಯೆ ನೀಡಲಾಗುವುದು ಎಂದು ಹೇಳಿದರು. ಭದ್ರತೆಗಾಗಿ ನಿಯೋಜನೆಗೊಳ್ಳುವ 5000 ಪೊಲೀಸರಿಗೆ ಕಲ್ಯಾಣ ಮಂಟಪ ಹಾಗೂ ಇತರೆಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಕನಿಷ್ಟ 60 ದಿನಗಳ ಕಾಲ ಅಧಿವೇಶನ ನಡೆಯಬೇಕು. ಛಳಿಗಾಲದ ಅಧಿವೇಶನ ಸೇರಿದಂತೆ 40 ದಿನಗಳ ಅಧಿವೇಶನ ನಡೆದಂತಾಗುತ್ತದೆ ಎಂದು ತಿಳಿಸಿದರು.

ನೌಕಾನೆಲೆ ವೀಕ್ಷಿಸಲು ಶಾಸಕರಿಗೆ ಅವಕಾಶ ಕಲ್ಪಿಸುವಂತೆ ಪ್ರಧಾನಿಯವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನ.18ರಂದು ಮಂಗಳೂರಿನ ನೌಕಾನೆಲೆಗೆ ತೆರಳುವುದಾಗಿ ಅವರು ಹೇಳಿದರು. ಮೇಯರ್ ಚುನಾವಣೆ ಸಂದರ್ಭದಲ್ಲಿ ವಿಳಾಸ ಬದಲಾವಣೆ ಮಾಡಿದ 8 ವಿಧಾನ ಪರಿಷತ್ ಸದಸ್ಯರ ಬಗ್ಗೆ ಪದ್ಮನಾಭರೆಡ್ಡಿಯವರು ನೀಡಿರುವ ದೂರಿನ ಬಗ್ಗೆ ಅಧಿವೇಶನದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

Facebook Comments

Sri Raghav

Admin