200ಕ್ಕೂ ಹೆಚ್ಚು ಸರಕುಗಳ ಜಿಎಸ್‍ಟಿ ಶೇ.28 ರಿಂದ 18ಕ್ಕೆ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

GST--01
ಗುವಾಹತಿ, ನ.10- ದೇಶಾದ್ಯಂತ ಅನುಷ್ಠಾನಗೊಂಡಿರುವ ಏಕರೂಪದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ಧತಿಯಿಂದ ಗ್ರಾಹಕರು ಮತ್ತು ವರ್ತಕರಿಗೆ ಉಂಟಾಗಿರುವ ಹೊರೆ ಮತ್ತು ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 200ಕ್ಕೂ ಹೆಚ್ಚು ಸರಕುಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ಇಳಿಸಿದೆ.  ದಿನಬಳಕೆಯ ಸರಕುಗಳು, ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ಕೈಯಿಂದ ತಯಾರಿಸಿದ ಪೀಠೋಪಕರಣಗಳ ತೆರಿಗೆಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದೆ. ಅಸ್ಸೋಂ ರಾಜಧಾನಿ ಗುವಾಹತಿಯಲ್ಲಿ ಇಂದು ನಡೆದ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ದಿನಬಳಕೆಯ 200ಕ್ಕೂ ಹೆಚ್ಚು ಸರಕುಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಸ್ನಾನದ ಕೋಣೆಯ ಪರಿಕರಗಳು, ಫ್ಲೈವುಡ್, ಸ್ಟೇಷನರಿ ಸರಕು, ಸೂಟ್‍ಕೇಸ್, ವಾಲ್‍ಪೇಪರ್, ಆಟಿಕೆ ಸಾಮಾನು ಮತ್ತು ಗಡಿಯಾರಗಳು ಅಗ್ಗವಾಗುವ ಸರಕುಗಳ ಪಟ್ಟಿಯಲ್ಲಿ ಇವೆ ಎಂದು ಮೂಲಗಳು ವಿವರಿಸಿವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳ ಹಿನ್ನೆಲೆಯಲ್ಲಿಯೂ ಕೇಂದ್ರ ಸರ್ಕಾರ ಜಿಎಸ್‍ಟಿ ಸರಕುಗಳ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಶೇ.28ರ ತೆರಿಗೆ ದರ ವ್ಯಾಪ್ತಿಯಲ್ಲಿರುವ ಸರಕುಗಳು ಮತ್ತು ಜನಸಾಮಾನ್ಯರು ಉಪಯೋಗಿಸುವ ಉತ್ಪನ್ನಗಳ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಸಭೆಯಲ್ಲಿ ಬೆಳಗ್ಗೆಯಿಂದ ವ್ಯಾಪಕ ಚರ್ಚೆ ನಡೆಯಿತು.ಚರ್ಚೆ ನಂತರ ಜಿಎಸ್‍ಟಿ ಸಮಿತಿ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ 200ಕ್ಕೂ ಹೆಚ್ಚು ಸರಕುಗಳು ಮತ್ತು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ಇಳಿಸಲು ಸಮ್ಮತಿ ನೀಡಿದರು. ಈ ಕುರಿತು ಸಂಜೆ ಅಧಿಕೃತ ಪ್ರಕಟಣೆ ಹೊರಬೀಳಲಿದ್ದು, ತೆರಿಗೆ ಕಡಿಮೆಯಾಗಿರುವ ಸರಕುಗಳು ಮತ್ತು ಉತ್ಪನ್ನಗಳ ಪಟ್ಟಿ ಹೊರಬೀಳಲಿದೆ.

ಸಭೆಯಲ್ಲಿ ತೆರಿಗೆ ದರಗಳ ಸಮಗ್ರ ಪರಿಷ್ಕರಣೆ, ರಿಟರ್ನ್ ಸಲ್ಲಿಕೆ ಸರಳೀಕರಣ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಹೆಚ್ಚು ಪರಿಹಾರ ಒದಗಿಸುವ ನಿರ್ಧಾರಗಳ ಬಗ್ಗೆಯೂ ದೀರ್ಘ ಸಮಾಲೋಚನೆ ನಡೆದು ಕೆಲವು ಪ್ರಯೋಜನಕಾರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹೋಟೆಲ್ ಮತ್ತು ರೆಸ್ಟೊರೆಂಟ್ ಸಂಘಗಳ ಒಕ್ಕೂಟದ ಸದಸ್ಯರು ಮಂಡಳಿಯ ಸದಸ್ಯರನ್ನು ನಿನ್ನೆ ಗುವಾಹತಿಯಲ್ಲಿ ಭೇಟಿಯಾಗಿ, ಉದ್ಯಮದ ಮೇಲಿನ ತೆರಿಗೆ ಹೊರೆ ತಗ್ಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ವಿವಿಧ ರಾಜ್ಯಗಳ ಹಣಕಾಸು ಸಚಿವರು ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಾಗಿತ್ತು. ಹೊಟೇಲ್ ಉದ್ದಿಮೆಗೆ ಸಂಬಂಧಿಸಿದಂತೆ ಮಂಡಳಿಯು ಹೂಡುವಳಿ ತೆರಿಗೆ (ಇನ್‍ಪುಟ್ ಕ್ರೆಡಿಟ್) ರದ್ದುಪಡಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇದು ಉದ್ದಿಮೆಗೆ ಮಾರಕವಾಗಲಿದೆ. ಜಿಎಸ್‍ಟಿ ಮೂಲ ತತ್ವಕ್ಕೂ ಇದು ವಿರುದ್ಧವಾಗಿರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಗ್ರಾಹಕರು ಮತ್ತು ಸಣ್ಣ ಉದ್ದಿಮೆದಾರರಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ತೆರಿಗೆ ದರಗಳ ಹಂತ ಕಡಿಮೆ ಮಾಡಲಾಗಿದ್ದು, ಜನಸಾಮಾನ್ಯರು ಮತ್ತು ವ್ಯಾಪಾರಿಗಳಿಗೆ ಈಗ ತೆರಿಗೆ ಹೊರೆ ಭಾರ ಕಡಿಮೆಯಾಗಿದ್ದು, ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Facebook Comments

Sri Raghav

Admin