ಕಾನೂನು ಅರಿವು ಮೂಡಿಸಲು ಮೀಸಲಿಟ್ಟ ಹಣ ಬಳಕೆಯಾಗಿಲ್ಲ : ನ್ಯಾ.ರಂಜನ್ ಗೊಗೈ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

justice--1

ಬೆಂಗಳೂರು, ನ.11- ಜನರಲ್ಲಿ ಅರಿವು ಮೂಡಿಸಲು ಉಚಿತ ಕಾನೂನು ಸೇವೆಗಳಿಗಾಗಿ ಮೀಸಲಿಟ್ಟ ಹಣ ಪೂರ್ಣವಾಗಿ ದಕ್ಷಿಣ ರಾಜ್ಯಗಳಲ್ಲಿ ಬಳಕೆಯಾಗಿಲ್ಲ ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಹಣಾಧ್ಯಕ್ಷ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೈ ತಿಳಿಸಿದರು.
ವಿಧಾನಸೌಧದಲ್ಲಿಂದು ನಡೆದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ದಕ್ಷಿಣ ವಲಯದ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಜನರಿಗೆ ಉಚಿತ ಕಾನೂನು ಅರಿವು ಮೂಡಿಸಲು ಮೀಸಲಿಟ್ಟ ಹಣದಲ್ಲಿ 4 ಕೋಟಿ ರೂ. ಬಳಕೆಯಾಗದೇ ಉಳಿದಿದೆ ಎಂದರು.

ಅದೇ ರೀತಿ ತಮಿಳುನಾಡಿನ 3.20ಕೋಟಿ ರೂ., ಆಂಧ್ರಪ್ರದೇಶದಲ್ಲಿ 3.53 ಕೋಟಿ ರೂ., ತೆಲಂಗಾಣ 3.01 ಕೋಟಿ ರೂ. ಬಳಕೆಯಾಗದೇ ಇದ್ದು, ಈ ಹಣವನ್ನು ವೆಚ್ಚ ಮಾಡಲು ನ್ಯಾಯಮೂರ್ತಿಗಳ ಅನುಮತಿ ಪಡೆಯಬೇಕಿಲ್ಲ. ಕಾನೂನು ಸೇವಾ ಪ್ರಾಧಿಕಾರಗಳೇ ಖರ್ಚು ಮಾಡಬಹುದಾಗಿದೆ ಎಂದು ಹೇಳಿದರು. ಕಾನೂನು ಸೇವೆ ಮತ್ತು ನೆರವನ್ನು ಜನರಿಗೆ ನೀಡುವಲ್ಲಿ ಯಾವ ರೀತಿ ಸುಧಾರಣೆ ತರಬಹುದು ಎಂಬುದಕ್ಕೆ ಸಮ್ಮೇಳನದಲ್ಲಿ ಸಂವಾದ ಮಾಡಬಹುದು. ಕಾನೂನು ಸೇವಾ ಮತ್ತು ನೆರವಿನ ಸುಧಾರಣೆ ಮಾಡಲು, ಉತ್ತಮ ಪಡಿಸಲು ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಾನೂನು ಸೇವೆಗಳ ವ್ಯಾಖ್ಯಾನ ಕೂಡ ಬದಲಾಗಬೇಕು. ಕಾನೂನು ನೆರವು ಮತ್ತು ಸೇವೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಕಾನೂನು ಸೇವಾ ಪ್ರಾಧಿಕಾರದ ಕಾರ್ಯಗಳಲ್ಲಿ ನ್ಯಾಯಮೂರ್ತಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಕರ್ನಾಟಕದಲ್ಲಿ 2093 ಕಾನೂನು ಸೇವಾ ನೆರವು ನೀಡುವ ಸ್ವಯಂ ಸೇವಕರಿದ್ದು, ಒಟ್ಟಾರೆ ಜನಸಂಖ್ಯೆಯ ಶೇ.30ರಷ್ಟಿದೆ. ಇದರ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿ ಗ್ರಾಮಗಳಲ್ಲೂ ಕಾನೂನು ಸೇವೆ ಕೇಂದ್ರ ಸ್ಥಾಪಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಈಗಾಗಲೇ ತಮಿಳುನಾಡಿನಲ್ಲಿ 1500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾನೂನು ಸೇವೆ ಮತ್ತು ನೆರವು ನೀಡುವ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂಬ ಮಾಹಿತಿ ನೀಡಿದರು.

Facebook Comments

Sri Raghav

Admin