ದಿವ್ಯಾಂಗರಿಗೆ ಸರ್ಕಾರಿ ನೌಕರಿ, ಉದ್ಯೋಗ ಮೀಸಲಾತಿ ಶೇ.4ಕ್ಕೆ ಹೆಚ್ಚಳ : ಗೆಹ್ಲೋಟ್

ಈ ಸುದ್ದಿಯನ್ನು ಶೇರ್ ಮಾಡಿ

gellote

ಬೆಂಗಳೂರು, ನ.11-ದಿವ್ಯಾಂಗರಿಗೆ ಸರ್ಕಾರಿ ನೌಕರಿ, ಉದ್ಯೋಗದಲ್ಲಿ ಮೀಸಲಾತಿಯನ್ನು ಶೇ.3ರಿಂದ ಶೇ.4ಕ್ಕೆ ಹೆಚ್ಚಿಸಲಾಗಿದ್ದು, ಅದನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಾಮಾಜಿಕ ಹಾಗೂ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ತಾವರ್‍ಚಂದ್ ಗೆಹ್ಲೋಟ್ ಇಂದಿಲ್ಲಿ ತಿಳಿಸಿದರು. ನಗರದ ಪಾಲನಾ ಭವನದಲ್ಲಿ ಪರಿವಾರ ಸಂಸ್ಥೆ ಮತ್ತು ದಿವ್ಯಾಂಗ ಮಕ್ಕಳ ಪೋಷಕರ ಸಂಘಟನೆ ಹಮ್ಮಿಕೊಂಡಿದ್ದ ಪೋಷಕರ 25ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದಿವ್ಯಾಂಗರಲ್ಲಿ 21ವಿಧಗಳಿವೆ. ಅವರಲ್ಲಿ ಪ್ರತಿಯೊಂದು ಸಮಸ್ಯೆಯೂ ಭಿನ್ನತೆ ಇರುತ್ತದೆ. ಅಂತಹುದನ್ನು ಗುರುತಿಸಿ ನಾಲ್ಕು ಭಾಗಗಳಾಗಿ ವರ್ಗೀಕರಣ ಮಾಡಲಾಗಿದೆ. ದಿವ್ಯಾಂಗರ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 4ಕ್ಕೆ ಹೆಚ್ಚಿಸಿ ನಾಲ್ಕು ವರ್ಗೀಕೃತ ವಿಭಾಗಕ್ಕೆ ಶೇ.1ರಷ್ಟು ಪ್ರಮಾಣದ ಮೀಸಲಾತಿ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಉದ್ಯೋಗದಲ್ಲಿ ಕಡ್ಡಾಯವಾಗಿ ಮೀಸಲಾತಿಯನ್ನು ಜಾರಿಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.

ದಿವ್ಯಾಂಗ ಮಕ್ಕಳನ್ನು ಪಾಲನೆ ಮಾಡುವ ಪೋಷಕರ ಸಮಸ್ಯೆಗಳ ಬಗ್ಗೆ ನನಗೆ ವೈಯಕ್ತಿಕವಾಗಿ ಅನುಭವವಾಗಿದೆ. ದಿವ್ಯಾಂಗರನ್ನು ಪೋಷಿಸುವುದು ಸುಲಭವಾದ ಕೆಲಸವಲ್ಲ. ಅವರು ಹಲ್ಲೆ ಮಾಡುತ್ತಾರೆ, ಕೈಗೆ ಸಿಕ್ಕಿದ್ದನ್ನು ಎಸೆಯುತ್ತಾರೆ. ಹಠಮಾಡುತ್ತಾರೆ. ಎಲ್ಲವನ್ನು ನಿಭಾಯಿಸಿಕೊಂಡು ಅವರನ್ನು ಪೋಷಿಸಬೇಕಿದೆ. ಪೋಷಕರ ತಾಳ್ಮೆ ಶ್ಲಾಘನೀಯ ಎಂದರು. ನಮ್ಮ ಸರ್ಕಾರ ವಿಕಲಚೇತನರ ಶ್ರೇಯೋಭಿವೃದ್ಧಿಗೆ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಿಂದ ಮೂರು ಗಿನ್ನಿಸ್ ದಾಖಲೆಗಳು ನಿರ್ಮಾಣವಾಗಿದೆ. ಸುಮಾರು 8 ಲಕ್ಷ ದಿವ್ಯಾಂಗರಿಗೆ 5 ಸಾವಿರ ಕೋಟಿಯಷ್ಟು ಸೌಲಭ್ಯಗಳನ್ನು ಹಂಚಿಕೆ ಮಾಡಲಾಗಿದೆ. ದಿವ್ಯಾಂಗ ಮಕ್ಕಳನ್ನು ಸಾಂಸ್ಕತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಿಂದ ಹಲವಾರು ಮಕ್ಕಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನಗಳನ್ನು ತಂದಿದ್ದಾರೆ ಎಂದು ಹೇಳಿದರು.

ದಿವ್ಯಾಂಗರಿಗೆ ಯುನಿವರ್ಸಲ್ ಐಡೆಂಟಿಟಿ ಕಾರ್ಡ್ ನೀಡಲು ಕ್ರಮಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಹಂಚಿಕೆ ಮಾಡಲಾಗಿದೆ. ಈಗ ಅದನ್ನು ರಾಷ್ಟ್ರಾದ್ಯಂತ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ದಿವ್ಯಾಂಗ ಮಕ್ಕಳ ಸೇವೆಗಾಗಿಯೇ ಶ್ರಮಿಸುತ್ತಿರುವ ಪರಿವಾರ ಟ್ರಸ್ಟ್ ರಾಷ್ಟ್ರೀಯ ಟ್ರಸ್ಟ್ ನ ಸ್ಥಾನಮಾನ ನೀಡಲು ಪರಿಶೀಲನೆ ನಡೆಸಲಾಗುವುದು. ಇದಕ್ಕಾಗಿ ಕೆಲವು ಕಾನೂನು ತಿದ್ದುಪಡಿ ಆಗಬೇಕಿದೆ. ಬೈಲಾಗಳು ತಿದ್ದುಪಡಿಯಾಗಬೇಕಿದೆ ಎಂದರು. ಈ ಮೊದಲು ದಿವ್ಯಾಂಗ ಮಕ್ಕಳ ಮೆಟ್ರಿಕ್ ಹಾಗೂ ಮೆಟ್ರಿಕ್ ಪೂರ್ವ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ದಿವ್ಯಾಂಗರ ಉನ್ನತ ಶಿಕ್ಷಣಕ್ಕೆ ಹಾಗೂ ವಿದೇಶಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದು ಗೆಲ್ಹೋಟ್ ತಿಳಿಸಿದರು.

ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಕಿರಣ್‍ಬೇಡಿ ಮಾತನಾಡಿ, ದಿವ್ಯಾಂಗ ಮಕ್ಕಳ ಪೋಷಕರಿಗೆ ಸರ್ಕಾರಿ ನೌಕರಿಯ ಶೇ.1ರಷ್ಟು ಮೀಸಲಾತಿ ನೀಡುವಂತೆ ಮನವಿ ಮಾಡಿದರು. ಪರಿವಾರ ಟ್ರಸ್ಟ್ ಗೆ ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದ ಅನುದಾನ ಕಾಯ್ದಿರಿಸಬೇಕು, ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಕಾಲಕಾಲಕ್ಕೆ ತರಬೇತಿ ನೀಡಬೇಕೆಂದು ಕೋರಿದರು. ಮಹಾಧರ್ಮಾಧ್ಯಕ್ಷ ಬರ್ನಾಡ್ ಮೋರಸ್ ಮಾತನಾಡಿ, ಕ್ರೈಸ್ಥ ಮಿಷನರಿಗಳು ಕೇವಲ ಪ್ರಾರ್ಥನೆ, ಅಧ್ಯಾತ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ದಿವ್ಯಾಂಗ ಮಕ್ಕಳ ಪೋಷಣೆಯನ್ನು ಆದ್ಯತೆಯಾಗಿ ತೆಗೆದುಕೊಂಡಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಇಂತಹ ಕೇಂದ್ರಗಳು ಕಂಡುಬರುತ್ತವೆ ಎಂದು ತಿಳಿಸಿದರು. ಪೋ.ಕೆ.ಆರ್.ವೆಂಕಟೇಶ್, ಶ್ರೀರಂಗ್ ಬಿಜ್ಜೂರ್, ಡಾ.ಹಿಮಾಂಶು ದಾಸ್, ಟ್ರಸ್ಟ್ ನ ಸಿಇಒ ಮುಖೇಶ್ ಜೈನ್, ಡಾಲಿ ಚಕ್ರವರ್ತಿ ಮತ್ತಿತರರು ಉಪಸ್ಥಿತರಿದ್ದರು.

Facebook Comments