ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಆದೇಶ ಪಾಲಿಸದಿದ್ದರೆ ಚುನಾವಣೆ ಬಹಿಷ್ಕಾರ : ಅಹಿಂಸಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ahimsa--01
ಬೆಂಗಳೂರು, ನ.11- ಬಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಫೆ.9ರಂದು ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿ ಮಾಡದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕಾಗುತ್ತದೆ ಎಂದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಸಾಮಾನ್ಯವರ್ಗ ಸಂಘಟನೆ (ಅಹಿಂಸಾ) ಎಚ್ಚರಿಕೆ ನೀಡಿದೆ. ನಗರದ ಅರಮನೆ ಮೈದಾನದಲ್ಲಿ ನಿನ್ನೆ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಅಹಿಂಸಾ ವರ್ಗದ ಸರ್ಕಾರಿ ನೌಕರರು ರಾಜ್ಯ ಸರ್ಕಾರ ಶೇ.82ರಷ್ಟಿರುವ ಜನಸಮುದಾಯದ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶಕ್ಕೂ ಮೊದಲು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಸರ್ಕಾರಿ ನೌಕರರು ಅಲ್ಲಿಂದ ಅರಮನೆ ರಸ್ತೆ, ಚಾಲುಕ್ಯ ವೃತ್ತ, ಮೌಂಟ್‍ಕಾರ್ಮೆಲ್ ರಸ್ತೆ, ಬಳ್ಳಾರಿ ಮುಖ್ಯರಸ್ತೆ ಮುಖಾಂತರ ಅರಮನೆ ಆವರಣದವರೆಗೂ ಪ್ರತಿಭಟನಾ ಪಾದಾಯಾತ್ರೆಯಲ್ಲಿ ಸಮಾವೇಶಕ್ಕೆ ಆಗಮಿಸಿದರು.
ರ್ಯಾಲಿ ಆರಂಭಕ್ಕೂ ಮುನ್ನ ಪತ್ರಿಕೆ ಯೊಂದಿಗೆ ಮಾತನಾಡಿದ ಬಹುತೇಕ ಸರ್ಕಾರಿ ನೌಕರರು, ಸುಪ್ರೀಂಕೋರ್ಟ್ ಆದೇಶವನ್ನು ಜಾರಿ ಮಾಡದೇ ಇದ್ದರೆ ಅಹಿಂಸಾ ಸಂಘಟನೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಲಿದೆ ಎಂದು ತಿಳಿಸಿದರು.

1978ರಲ್ಲಿ ಜಾರಿಯಾದ ಬಡ್ತಿ ಮೀಸಲಾತಿ ನೀತಿಯಿಂದ ಲಕ್ಷಾಂತರ ಕುಟುಂಬ ಗಳಿಗೆ ಅನ್ಯಾಯವಾಗಿದೆ. 1992ರಲ್ಲಿ ಈ ಆದೇಶವನ್ನು ಪ್ರಥಮ ಬಾರಿಗೆ ಕೆಎಟಿಯಲ್ಲಿ ಪ್ರಶ್ನಿಸಲಾಯಿತು. ಹೈಕೋರ್ಟ್, ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಸಮರ ನಡೆದು 2000ದಲ್ಲಿ ಅಹಿಂಸಾ ವರ್ಗದ ಬಡಪ್ಪ ಪ್ರಕರಣದಲ್ಲಿ ನ್ಯಾಯ ದೊರಕಿತ್ತು. ಆದರೆ, 2002ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಬಡಪ್ಪ ಪ್ರಕರಣದ ತೀರ್ಪನ್ನು ಅಸಿಂಧುಗೊಳಿಸಲಾಗಿದೆ. ಎಂ.ನಾಗರಾಜ್ ಪ್ರಕರಣದಲ್ಲಿ ಸಂವಿಧಾನ ತಿದ್ದುಪಡಿಯನ್ನು ಪ್ರಶ್ನಿಸಲಾಯಿತು. 2006ರಲ್ಲಿ ಬಡ್ತಿ ಮೀಸಲಾತಿಯನ್ನು ಮಿತಿಗೊಳಿಸುವ ಆದೇಶ ಜಾರಿಯಾಯಿತು. 2010ರಲ್ಲಿ ಮತ್ತೊಂದು ಬಾರಿ ಕೋರ್ಟ್ ಆದೇಶ ಅಹಿಂಸಾ ವರ್ಗದವರ ಪರವಾಗಿ ಬಂದಿತ್ತು.

ಸುಮಾರು 25 ವರ್ಷಗಳ ಸುದೀರ್ಘ ಹೋರಾಟದಿಂದ ಅಂತಿಮವಾಗಿ ಕಳೆದ ಫೆ.9ರಂದು ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡಿ ಬಡ್ತಿ ಮೀಸಲಾತಿ ಜ್ಯೇಷ್ಠತೆ ಸರಿಯಿಲ್ಲ. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಬಡ್ತಿ ಮೀಸಲಾತಿಯನ್ನು ಮೂರು ತಿಂಗಳ ಒಳಗಾಗಿ ಹಿಂಪಡೆಯಬೇಕು. ಎಲ್ಲರಿಗೂ ಸಮಾನ ಬಡ್ತಿ ಅವಕಾಶಗಳನ್ನು ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಅದನ್ನು ಜಾರಿ ಮಾಡದ ರಾಜ್ಯ ಸರ್ಕಾರ ಮತ್ತೊಂದು ಕಾನೂನು ರಚಿಸಿ ಅಹಿಂಸಾ ವರ್ಗ ಹಿತ ಬಲಿ ಕೊಡಲು ಮುಂದಾಗಿದೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಸಹಿ ಹಾಕದೆ ರಾಜ್ಯಪಾಲರು ಎರಡು ಬಾರಿ ತಿರಸ್ಕರಿಸಿದ್ದಾರೆ. ಈಗ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಬಡ್ತಿ ಮೀಸಲಾತಿಯನ್ನು ಉಳಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಪ್ರಯತ್ನವನ್ನು ಕೂಡಲೇ ಕೈ ಬಿಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಶೇ.18ರಷ್ಟಿರುವ ಜನಸಂಖ್ಯೆಯ ಪರವಾಗಿದೆಯೇ ಅಥವಾ ಶೇ.82ರಷ್ಟಿರುವ ಜನಸಂಖ್ಯೆಯ ಪರವಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
ನ್ಯಾಯಾಲಯದಿಂದ ಆದೇಶ ತಂದರೂ ಅದನ್ನೂ ಜಾರಿ ಮಾಡದೇ ಇರುವ ಸರ್ಕಾರದ ಧೋರಣೆ ಖಂಡನೀಯ. ಶೇ.18ರ ಮೀಸಲಾತಿಯಲ್ಲಿ ನಿರಂತರವಾಗಿ ಪಟ್ಟಿ ಪಡೆದು ಉನ್ನತ ಸ್ಥಾನದಲ್ಲಿರುವವರು ಕಾಲ ಕಾಲಕ್ಕೆ ಬಡ್ತಿಯನ್ನು ಪಡೆಯುತ್ತಲೇ ಇದಾರೆ ಮತ್ತು ಶೇ.18ರ ಬದಲಾಗಿ ಶೇ.100ರಷ್ಟು ಬಡ್ತಿ ಪಡೆದಿದ್ದಾರೆ. ಆದರೆ, ಅಹಿಂಸಾ ವರ್ಗದವರು ಸುಮಾರು 20 ವರ್ಷಗಳಿಂದಲೂ ಬಡ್ತಿ ಇಲ್ಲದೆ ನಿವೃತ್ತಿಯಾಗಿದ್ದಾರೆ.

ರಾಜ್ಯ ಸರ್ಕಾರ ಈಗಲಾದರೂ ಅಹಿಂಸಾ ವರ್ಗಕ್ಕೆ ನ್ಯಾಯ ಕೊಡಿಸದೇ ಹೋದರೆ ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ಫ್ರೀಡಂಪಾರ್ಕ್‍ನಲ್ಲಿ ಸಾವಿರಾರು ಮಂದಿ ಅಹಿಂಸಾ ಎಂಬ ಬರಹವಿದ್ದ ಬಿಳಿ ಟೋಪಿ ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ರ್ಯಾಲಿಯಲ್ಲಿ ಭಾಗವಹಿಸಿದವರು ರಾಜ್ಯ ಸರ್ಕಾರ ನಮ್ಮ ಹಿತವನ್ನು ಕಡೆಗಣಿಸುತ್ತಿದೆ. ಇದರಿಂದಾಗಿ 8 ಲಕ್ಷ ಕುಟುಂಬಗಳು ಬಡ್ತಿ ಇಲ್ಲದೆ ನಿವೃತ್ತಿಯಾಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಹಿಂಸಾ ವರ್ಗದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin