ಮರಿಗಳ ನೋಡಲು ಬಂದ ತಾಯಿ ಚಿರತೆ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

chirate
ಕೆ.ಆರ್.ಪೇಟೆ, ನ.11- ಚಿರತೆ ಮರಿಗಳನ್ನು ನೋಡಲು ಬಂದ ತಾಯಿ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ. ತಾಲ್ಲೂಕಿನ ಕಳ್ಳನಕೆರೆ ಗ್ರಾಮದ ದೇವರಾಜು ಎಂಬುವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಒಂದೂವರೆ ತಿಂಗಳಿನ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಕೂಡಲೇ ದೇವರಾಜು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಕಿಕ್ಕೇರಿ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಿದ್ದರಾಜು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಚಿರತೆ ಮರಿಗಳು ಅಲ್ಲಿಯೇ ಇರಬಹುದು ಎಂದು ತಾಯಿ ಚಿರತೆ ಮರಿಗಳನ್ನು ನೋಡಲು ಬಂದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಸೆರೆಸಿಕ್ಕಿದೆ.

ತಾಲ್ಲೂಕಿನ ಸೊಳ್ಳೆಪುರ, ಬೋಳಮಾರನಹಳ್ಳಿ, ಕುಂದನಹಳ್ಳಿ, ರಾಜೇನ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಚಿರತೆ ಮರಿಗಳನ್ನು ನೋಡಲು ತಾಯಿ ಚಿರತೆ ಬಂದೇ ಬರುತ್ತದೆ ಎಂದು ಅಂದಾಜಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನು ಇಟ್ಟು ಕಾಯುತ್ತಾ ಕುಳಿತಿದ್ದರು. ಊಹೆಯಂತೆ ತಾಯಿ ಚಿರತೆ ಬಂದು ಬೋನಿನೊಳಗೆ ಸಿಕ್ಕಿ ಹಾಕಿಕೊಂಡಿದೆ. ಕೂಡಲೇ ಚಿರತೆ ಮರಿ ಹಾಗೂ ತಾಯಿ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

[ ನಿಮ್ಮವರಿಗೂ ಈ ಸುದ್ದಿಯನ್ನು ತಪ್ಪದೆ ಶೇರ್ ಮಾಡಿ ]

Facebook Comments

Sri Raghav

Admin