ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

doctor

ಬೆಂಗಳೂರು,ನ.11- ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಗದಿತ ಸಮಯಕ್ಕೆ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿದ್ದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ವೈದ್ಯಕೀಯಕಾಲೇಜು ಆಸ್ಪತ್ರೆಗಳಲ್ಲಿ ತುರ್ತುಪರಿಸ್ಥಿತಿಗಳ ಸಂದರ್ಭದಲ್ಲಿ ವೈದ್ಯರು ಇಲ್ಲದೇ ಇರುವುದರ ಕುರಿತಂತೆ ಇತ್ತೀಚೆಗೆ ದೂರುಗಳು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕ್ರಮಕೈಗೊಂಡಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿನ್ನೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ವೈದ್ಯಕೀಯಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಸಹಾಯಕ ಪ್ರಾಧ್ಯಾಪಕರನ್ನು ರಾತ್ರಿ ಪಾಳಿಯಲ್ಲಿಯೂ ನಿಯೋಜಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಅಗತ್ಯ ಸೌಲಭ್ಯಗಳ ಕೊರತೆಯುಂಟಾದರೆಕಾಲೇಜಿನ ನಿರ್ದೇಶಕರು ಮತ್ತು ವೈದ್ಯಕೀಯ ಸೂಪರಿಂಟೆಂಡೆಂಟ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದುಎಂದು ತಿಳಿಸಿದೆ. ರಾತ್ರಿ ಪಾಳಿಯಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ವೈದ್ಯರು ಸಮಯ ಪಾಲನೆ ಮಾಡದಿದ್ದರೆ, ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ನಿರ್ದೇಶಕರು ಮತ್ತು ವೈದ್ಯಕೀಯ ಸೂಪರಿಂಟೆಂಡೆಂಟ್ ಅವರುಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅನುಮತಿ ಇಲ್ಲದೆಯೇಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದು.

ಅವರ ಅಧೀನ ಸಿಬ್ಬಂದಿಯೂ ಸಹ ತಮ್ಮ ಅನುಮತಿ ಪಡೆಯದೆರಜೆ ಪಡೆಯುವಂತಿಲ್ಲ ಎಂಬುದನ್ನು ಸೂಚಿಸಬೇಕು. ಸರ್ಕಾರಿ ವೈದ್ಯರು ಸಮೀಪದ ನಗರ, ಪಟ್ಟಣಗಳಲ್ಲಿ ಮನೆಮಾಡಿಕೊಂಡು ನಿತ್ಯ ಓಡಾಡುವಂತಿಲ್ಲ. ಆಸ್ಪತ್ರೆ ಅಕ್ಕಪಕ್ಕದಲ್ಲಿಯೇ ವಾಸಕ್ಕೆ ಸೌಲಭ್ಯ ಕಲ್ಪಿಸಬೇಕೆಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರಾಮುಖ್ಯತೆ ಆಧಾರದ ಮೇಲೆ ಚಿಕಿತ್ಸೆಗಳನ್ನು ನೀಡಬೇಕು. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಸೂಪರಿಂಟೆಂಡೆಂಟ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅನುಮತಿ ಇಲ್ಲದೆಯೇ ರಜೆ ಪಡೆಯುವಂತಿಲ್ಲ. ಆಸ್ಪತ್ರೆಯಲ್ಲಿ ಸ್ಟ್ರೆಚರ್, ಗಾಲಿಕುರ್ಚಿ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸೌಲಭ್ಯಗಳ ಕೊರತೆ ಇದ್ದರೆ, ಕೂಡಲೇ ಸರ್ಕಾರದ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

Facebook Comments

Sri Raghav

Admin