‘ಸಿದ್ದರಾಮಯ್ಯ ಬೆಸ್ಟ್ ಸಿಎಂ’

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-----01

ಬೆಂಗಳೂರು, ನ.11-ನಾನು 30 ವರ್ಷ ಗಳಲ್ಲಿ ಕಂಡ ಮುಖ್ಯಮಂತ್ರಿಗಳಲ್ಲಿ ಸಿಎಂ ಸಿದ್ದ ರಾಮಯ್ಯ ದಿ ಬೆಸ್ಟ್ ಸಿಎಂ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಹಾಡಿ ಹೊಗಳಿದರು. ಎಲ್ಲಾ ಭಾಗ್ಯವನ್ನು ಕೊಟ್ಟು ಬಡವರ ಹಸಿವು ನೀಗಿಸಿದ ಅಪರೂಪದ ಸಿಎಂ ಎಂದು ಬಣ್ಣಿಸಿದರು. ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ
ಅವರು, ಅನ್ನಭಾಗ್ಯ ಯೋಜನೆ ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ಸಿಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ನವ ವಿಜಯನಗರ ಯೋಜನೆ ಮೆಟ್ರೋ, ಬಿಬಿಎಂಪಿ ಸಹಯೋಗದಲ್ಲಿ 64 ಕೋಟಿ ರಸ್ತೆ, ಫುಟ್‍ಪಾತ್, ಕೆಎಎಸ್-ಐಎಎಸ್ ಸಂಸ್ಥೆ ಇದೆ. ವಿದ್ಯಾರ್ಥಿಗಳಿಗೆ ಎರಡು ಗ್ರಂಥಾಲಯ ಸ್ಥಾಪನೆ, ಆರ್‍ಪಿಎಸ್ ಲೇಔಟ್‍ನಲ್ಲಿ 3 ಕೋಟಿ ವೆಚ್ಚದಲ್ಲಿ ಆಟದ ಮೈದಾನ, ಸಂಗೊಳ್ಳಿರಾಯಣ್ಣ ಪ್ರತಿಮೆ, 3 ಈಜುಕೊಳ ನಿರ್ಮಾಣ, ವಿಜಯನಗರ, ಗೋವಿಂದರಾಜನಗರ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕೆಲಸ ಮಾಡಲಾಗಿದೆ ಎಂದು ಹೇಳಿದರು.

444 ಸ್ಲಂ ನವರಿಗೆ ಕ್ರಯಪತ್ರ ನೀಡಲಾಗಿದೆ. ಸ್ಲಂಗಳಲ್ಲಿ ಮನೆ ಕಟ್ಟುವವರಿಗೆ 8 ಕೋಟಿ ಸಾಲ ನೀಡಲಾಗಿದೆ. ಕಾರ್ಡ್ ರಸ್ತೆಯಲ್ಲಿನ ತರಕಾರಿ ಮಳಿಗೆಗಳನ್ನು ತೆರವುಗೊಳಿಸಿ ಅಂಡರ್‍ಪಾಸ್ ಸೆಲ್ಲರ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 49 ಸಾವಿರ ಪಡಿತರ ಕಾರ್ಡ್ ವಿತರಣೆ ಮಾಡಲಾಗಿದ್ದು, 15 ಸಾವಿರ ಕಾರ್ಡ್‍ಗಳು ಬಾಕಿ ಇವೆ. ತಕ್ಷಣದಲ್ಲೇ ಅದನ್ನು ಮಾಡಲಾಗುವುದು. 4480 ಮನೆ ವಿತರಣೆ ಮಾಡಲು ಎರಡೂ ಕ್ಷೇತ್ರಗಳಿಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ವಸತಿ ಇಲಾಖೆ ವತಿಯಿಂದ ಇದುವರೆಗೆ ಬಡವರಿಗೆ 13 ಲಕ್ಷ ಮನೆಗಳನ್ನು ನಿರ್ಮಿಸಿದ್ದು, ಇನ್ನೂ 3ಲಕ್ಷ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದೇವೆ ಎಂದರು. ಶಾಸಕ ಪ್ರಿಯಾಕೃಷ್ಣ ಮಾತನಾಡಿ, ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ತಿಳಿಸಲು ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಪ್ಲೇಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಈ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.

ಮೇಯರ್ ಸಂಪತ್‍ರಾಜ್ ಮಾತನಾಡಿ, ನಮ್ಮ ಮುಖ್ಯಮಂತ್ರಿಗಳು ಸಚಿನ್ ತೆಂಡೂಲ್ಕರ್ ಇದ್ದಂತೆ. ಅವರು ಸಚಿನ್ ನಿರ್ಮಿಸಿರುವ ದಾಖಲೆಗಳ ನೆನಪು ಅವರಿಗೇ ಉಳಿದಿಲ್ಲ. ಅದೇ ರೀತಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಜನಪರ ಯೋಜನೆಗಳು, ಕಾರ್ಯಕ್ರಮಗಳು ಹಾಗೇ ಎಂದು ಹಾಡಿ ಹೊಗಳಿದರು. ವಿಜಯನಗರ, ಗೋವಿಂದರಾಜು ನಗರದಲ್ಲಿ ಒಟ್ಟು 415 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ಕಾಂಕ್ರೀಟ್‍ರಸ್ತೆ, ಪಾದಚಾರಿ ಮಾರ್ಗ, ವಾಸ್ತುಶಿಲ್ಪ, ವಿದ್ಯುತ್ ಅಲಂಕಾರದ ಶಂಕುಸ್ಥಾಪನೆ, ನೀರು ಸರಬರಾಜು ಘಟಕ, ಪಾಲಿಕೆ ಬಜಾರ್, ಕೆಳಸೇತುವೆ, ಈಜುಕೊಳ, ಗ್ರಂಥಾಲಯ ಎರಡೂ ಕ್ಷೇತ್ರಗಳ ನಾಲ್ಕು ರಸ್ತೆಗಳ ವೈಟ್ ಟ್ಯಾಪಿಂಗ್, ವೃಷಭಾವತಿ ಮತ್ತು ಇತರೆ ರಾಜಕಾಲುವೆ ಅಭಿವೃದ್ಧಿ, 60 ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕ ಪ್ರಿಯಾಕೃಷ್ಣ, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಬಿಬಿಎಂಪಿ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Facebook Comments

Sri Raghav

Admin