ಕಮೀಷನ್ ನೀಡದಿದ್ದರೆ ವಿತರಣೆ ಸ್ಥಗಿತ : ಪಡಿತರ ವಿತರಕರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ration-Card-01

ಬೆಂಗಳೂರು, ನ.12- ಕಳೆದ ಹಲವು ತಿಂಗಳಿನಿಂದ ಬಾಕಿ ಇರುವ ಕಮೀಷನ್ ಹಣವನ್ನು ಬಿಡುಗಡೆ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಪಡಿತರ ಧಾನ್ಯವನ್ನು ವಿತರಣೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಎಚ್ಚರಿಸಿದೆ. ಈವರೆಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಕಮೀಷನ್ ಹಣವನ್ನು ಮಾತ್ರ ನಮಗೆ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಒಂದೂವರೆ ವರ್ಷಗಳಿಂದ ನೀಡಿದ್ದ ಆಶ್ವಾಸನೆಯಂತೆ ಕಮೀಷನ್ ನೀಡದೇ ಇರುವುದರಿಂದ ವಿತರಣೆ ಮಾಡುವುದಿಲ್ಲ ಎಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.

2016ರ ಜುಲೈ ತಿಂಗಳಿನಲ್ಲಿ ಅಂದಿನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ದಿನೇಶ್‍ಗುಂಡೂರಾವ್ ಹಾಗೂ ಅಧಿಕಾರಿಗಳ ಜತೆ ನಡೆಸಿದ ಮಾತುಕತೆಯಂತೆ ಪ್ರತಿ ಕ್ವಿಂಟಾಲ್‍ಗೆ 100ರೂ. ಕಮೀಷನ್ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈವರೆಗೂ ಕೇವಲ ಕೇಂದ್ರದಿಂದ ಬಿಡುಗಡೆಯಾಗಿರುವ ಹಣವನ್ನು ನೀಡುತ್ತಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಒಂದೇ ಒಂದು ನಯಾಪೈಸೆಯನ್ನೂ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಬೇಕು, ಸಾವಿರಾರು ಮಂದಿ ವಿತರಕರ ಸಂಘದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಮೀಷನ್ ಹಣ ನೀಡದಿದ್ದಾರೆ ನಾವು ಹೇಗೆ ಸಾಗಾಣಿಕೆ ಮಾಡಬೇಕಾಗುತ್ತದೆ ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ಹೆದರುವುದಿಲ್ಲ:

ರಾಜ್ಯ ಸರ್ಕಾರ ಪ್ರತಿಯೊಂದು ಮಳಿಗೆಗಳಿಗೂ ಭಯೋಮೆಟ್ರಿಕ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ನಮಗೆ ಬೆದರಿಕೆ ಹಾಕುತ್ತಿದೆ. ಕಮೀಷನ್ ಹಣವನ್ನೇ ನೀಡದಿರುವಾಗ ನಾವು ಸಾವಿರಾರು ರೂ. ಖರ್ಚು ಮಾಡಿ ಹೇಗೆ ಭಯೋಮೆಟ್ರಿಕ್ ಮಿಷನ್ ಅಳವಡಿಸಿಕೊಳ್ಳಬೇಕೆಂದು ಪ್ರಶ್ನಿಸಿದರು. ಭಯೋಮೆಟ್ರಿಕ್ ಅಳವಡಿಸಿಕೊಂಡರೆ ಸರ್ಕಾರ ಬ್ಯಾಂಕ್‍ನಿಂದ ಆರ್ಥಿಕ ನೆರವು ನೀಡುವುದಾಗಿ ವಾಗ್ದಾನ ಮಾಡಿತ್ತು. ಈವರೆಗೂ ಒಂದೇ ಒಂದು ರೂ. ಕೂಡ ನೀಡಿಲ್ಲ. ಮೊದಲೇ ಸಂಕಷ್ಟದಲ್ಲಿರುವ ನಮಗೆ ಭಯೋಮೆಟ್ರಿಕ್ ಖರೀದಿಸಲು ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನೆಟ್‍ವರ್ಕ್ ಇರುವ ಕಡೆ ನಾವು ಅಳವಡಿಸಿಕೊಂಡಿದ್ದೇವೆ. ಸರ್ಕಾರದ ಯಾವದೇ ಧಮ್ಕಿಗೆ ನಾವು ಬೆದರುವುದಿಲ್ಲ. ಕಮೀಷನ್ ಹಣ ಹಾಗೂ ಭಯೋಮೆಟ್ರಿಕ್ ಖರೀದಿಗೆ ಸಾಲ ಸೌಲಭ್ಯ ನೀಡಿದರೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು. ನೆರೆಯ ಗೋವಾ ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್‍ಗೆ ಅಲ್ಲಿನ ಸರ್ಕಾರ ನೂರು ರೂ. ಕಮೀಷನ್ ನೀಡುತ್ತದೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಸಹ 100ರಿಂದ 150ರೂ. ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ನೀಡಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಹಾಗೂ ಗೋಡೌನ್ ಮಾಲೀಕರು ಮಾಡುವ ಲೋಪದಿಂದಾಗಿ ಸರ್ಕಾರ ನಮಗೆ ಕಮೀಷನ್ ನೀಡಲು ಹಿಂದೇಟು ಹಾಕುತ್ತಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡುವುದು ಸರಿಯಲ್ಲ. ತಕ್ಷಣವೇ ಮಾತುಕತೆಗೆ ಆಹ್ವಾನಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ಕೃಷ್ಣಪ್ಪ ಹೇಳಿದರು.

Facebook Comments

Sri Raghav

Admin