ಕಳಸಾ-ಬಂಡೂರಿ ನೀರು ಕೊಡಿ, ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರ ಎದುರಿಸಲು ಸಿದ್ಧರಾಗಿ

ಈ ಸುದ್ದಿಯನ್ನು ಶೇರ್ ಮಾಡಿ

Kalasa-Bandoori--02

ಬೆಂಗಳೂರು, ನ.12- ಪಕ್ಷ ರಾಜಕಾರಣ ಜನ ಹಿತಕ್ಕಿಂತ ಮಿಗಿಲಾದುದು ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿರುವ ರಾಜಕೀಯ ಪಕ್ಷಗಳ ಮೂಗು ಹಿಡಿಯಲು, ಕಳಸಾ-ಬಂಡೂರಿ ಮಲಪ್ರಭಾ ಜೋಡಣಾ ಹೋರಾಟ ಕೇಂದ್ರ ಸಮಿತಿ, ಜನ ಸಾಮಾನ್ಯರ ವೇದಿಕೆ ಜತೆಗೂಡಿ ಹೊಸ ಚಳುವಳಿ ಪ್ರಾರಂಭಿಸುತ್ತಿವೆ.
ಕಳಸಾ-ಬಂಡೂರಿ ನಾಲಾ ಮತ್ತು ಮಹದಾಯಿ ಯೋಜನೆಗಳು ಕಳೆದ ಮೂರು ದಶಕಗಳಿಂದ ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪಕ್ಷದ ಹಿತಾಸಕ್ತಿಯೇ ಮುಖ್ಯ ಎಂಬುದನ್ನು ಸಾಬೀತು ಪಡಿಸುತ್ತಿರುವ ರಾಜಕೀಯ ಪಕ್ಷಗಳು ಎಂದರೆ ತಪ್ಪಾಗಲಾರದು.

ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕರ್ನಾಟಕ ಸರಕಾರ ಕೈಗೆತ್ತಿಕೊಂಡ ಯೋಜನೆ ಇದಾಗಿದೆ. ಗೋವಾದ ಜೀವನದಿಯಾಗಿರುವ ಮಾಂಡೋವಿ-ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ನೋವಿನ ಇತಿಹಾಸವಿದೆ. ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನೀರಿನಲ್ಲಿ 7.56 ಟಿಎಂಸಿ ಪಾಲು ಕೇಳಿದ ರಾಜ್ಯಕ್ಕೆ ಮತ್ತೆ ಮತ್ತೆ ನಿರಾಸೆಯಾಗುತ್ತಿದೆ.

ರಾಜಕೀಯ ಪಕ್ಷಗಳ ಕಣ್ಣಾಮುಚ್ಚಾಲೆ:

ಉತ್ತರ ಕರ್ನಾಟಕದ ಜನತೆಯನ್ನು ರಾಜಕೀಯ ಪಕ್ಷಗಳು ಮಲತಾಯಿ ಮಕ್ಕಳು ಎನ್ನುವ ರೀತಿಯಲ್ಲಿ ನಡೆಸಿಕೊಳ್ಳುತ್ತಿವೆ. ಪಕ್ಷ ರಾಜಕಾರಣ ಜನ ಹಿತಕ್ಕಿಂತ ಮಿಗಿಲಾದುದು ಎಂಬುದನ್ನು ಅಂದಿನ ಹಾಗೂ ಇಂದಿನ ಕೇಂದ್ರ ಸರ್ಕಾರಗಳು ಸಾಬೀತುಪಡಿಸಿವೆ. ಬಿಜೆಪಿ ನೇತೃತ್ವದ  ಎನ್‍ಡಿಎ ಸರಕಾರ ಗೋವಾ ಬಿಜೆಪಿ ಸರಕಾರಕ್ಕೆ ತಿಳಿಹೇಳಬಹುದಿತ್ತು. 2004ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಕೇಂದ್ರದಲ್ಲಿದ್ದ ಯು.ಪಿ.ಎ ಸರಕಾರ ಅಧಿಕಾರದ ಗದ್ದುಗೆ ಹಿಡಿದರೂ ಕಾಂಗ್ರೆಸ್ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಲೇ ಇಲ್ಲ.  ಎನ್‍ಡಿಎ ಸರಕಾರ ಈ ಯೋಜನೆಗೆ ನೀಡಿದ್ದ ತಡೆಯಾಜ್ಞೆ (19-09-2002) ಯನ್ನು ತೆರೆವುಗೊಳಿಸಲು ನಮ್ಮ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಸಾಧ್ಯವಾಗಲಿಲ್ಲ.

ಮುಂದಿನ ಹೋರಾಟ:

ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ಪಕ್ಷಗಳಿಗೆ ಸರಿಯಾದ ಬುದ್ಧಿ ಕಲಿಸುವ ಒಂದು ಸುವರ್ಣಾವಕಾಶವನ್ನು ಚುನಾವಣೆ ಒದಗಿಸಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಚಳುವಳಿಯನ್ನು ಹುಟ್ಟು ಹಾಕುವ ಅಗತ್ಯತೆಯನ್ನು ಎಲ್ಲಾ ಹೋರಾಟ ಸಮಿತಿಗಳು ನಿರ್ಧರಿಸಿವೆ. ಈ ಹೋರಾಟಕ್ಕೆ ಜನ ಸಾಮಾನ್ಯರ ವೇದಿಕೆ ಮೂಂಚೂಣಿಯನ್ನು ವಹಿಸಿಕೊಳ್ಳಲಿದೆ.  ಈ ಬಾರಿಯ ಚುನವಾಣೆಯಲ್ಲಿ ಮತ ಕೇಳಲು ಬರುತ್ತಿರುವ ನಾಯಕರುಗಳಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಕುಡಿಯುವ ನೀರು ಕೊಡಿ ಇಲ್ಲವೆ ಹೊರಡಿ ರಾಜಕಾರಣಿಗಳೇ ಚಳುವಳಿಯನ್ನು ಪ್ರಾರಂಭಿಸಲಿದ್ದು, ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಬರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಕಪ್ಪುಬಾವುಟವನ್ನು ತೋರಿಸುವ ಮೂಲಕ ನಮ್ಮ ಪ್ರತಿಭಟನೆ ದಾಖಲಿಸಲಿದ್ದೇವೆ.

ಚುನಾವಣೆ ಮುಗಿಯುವುದರೊಳಗೆ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ದೊರಕಿಸಿ ಕೊಡಿ ಇಲ್ಲವೆ ಚುನವಾಣೆ ಬಹಿಷ್ಕಾರಕ್ಕೆ ಸಿದ್ಧರಾಗಿ ಎನ್ನುವ ಎಚ್ಚರಿಕೆ ನೀಡುತ್ತಿದ್ದೇವೆ. ಗುಜರಾತ್ ಚುನಾವಣೆ ಮುಂದಿಟ್ಟುಕೊಂಡು ನೂರಾರು ಯೋಜನೆಗಳನ್ನು ಪ್ರಕಟಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆಯುವ ದೃಷ್ಟಿಯಿಂದ ಮುಂದಿನ ವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಚಿಂತಿಸಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಡಿ.ಅಯ್ಯಪ್ಪ, ಪದಾಧಿಕಾರಿಗಳಾದ ವಿಜಯ್ ಕುಲಕರ್ಣಿ ಮತ್ತಿತರರು ಕಿಡಿಕಾರಿದ್ದಾರೆ.

Facebook Comments

Sri Raghav

Admin