ಕೆಲವೇ ವಾರಗಳಲ್ಲಿ ಗೌರಿ ಹಂತಕರನ್ನು ಬಂಧಿಸುತ್ತೇವೆ : ಗೃಹ ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು, ನ.12- ಪತ್ರಕರ್ತೆ, ಹೋರಾಟ ಗಾರ್ತಿ ಗೌರಿಲಂಕೇಶ್ ಹಂತಕರ ಸುಳಿವು ಸಿಕ್ಕಿದ್ದು, ಇನ್ನು ಕೆಲವೇ ವಾರಗಳಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಕೊಲೆ ಮಾಡಿದವರು ಯಾರು ಎಂಬುದು ನಮಗೂ ತಿಳಿದಿದೆ. ಪ್ರಮುಖವಾಗಿ ಸಂಚು ರೂಪಿಸಿದವರು ಯಾರು ಎಂಬುದನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಗುಂಡು ಹಾರಿಸಿದವರು ಯಾರೆಂಬುದು ಮಾತ್ರ ತಿಳಿಯುತ್ತಿಲ್ಲ. ಆದರೂ ಅತಿ ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು.

ಎಸ್‍ಐಟಿ ತನಿಖಾ ವರದಿ ಆಧಾರದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಗೌರಿ ಹಂತಕರನ್ನು ಬಂಧಿಸಲು ನಮಗೆ ವರ್ಷಗಳು ಬೇಕಿಲ್ಲ. ಎಷ್ಟು ವಾರದಲ್ಲಿ ಬಂಧಿಸುತ್ತೇವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಕೆಲವೇ ವಾರಗಳಲ್ಲಿ ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ಯಾವ ಕಾರಣಕ್ಕಾಗಿ ಗೌರಿಲಂಕೇಶ್ ಅವರನ್ನು ಹತ್ಯೆ ಮಾಡಲಾಯಿತು, ಇದರ ಹಿಂದಿನ ಪಿತೂರಿ ಏನು ? ಗುಂಡು ಹೊಡೆದವರು ಯಾರು ಎಂಬುದು ನಮಗೆ ಮುಖ್ಯ.

ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ರುಜುವಾತು ಆಗಬೇಕಾದರೆ ಸಾಕ್ಷಿಗಳನ್ನು ಕಲೆ ಹಾಕಬೇಕಾಗುತ್ತದೆ. ಇದಕ್ಕಾಗಿ ವಿಳಂಬವಾಗಿದೆ ಎಂದರು. ಗೌರಿಯನ್ನು ಹತ್ಯೆ ಮಾಡುವ ಮುನ್ನ ಸಿಸಿಟಿವಿಯಲ್ಲಿ ಸೆರೆಯಾದ ಹಂತಕರ ಚಲನವಲನಗಳನ್ನು ನೋಡಿದ್ದ ಪ್ರಮುಖ ಸಾಕ್ಷಿದಾರರ ಹೇಳಿಕೆಯ ಆಧಾರದ ಮೇಲೆ ಕೆಲವು ಅನುಭವಿಗಳು ರೇಖಾ ಚಿತ್ರವನ್ನು ಸಿದ್ದಪಡಿಸಿದ್ದರು. ಇದರಿಂದ ತನಿಖೆಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು.

ದುರುಪಯೋಗ:

ಕೇಂದ್ರ ಸರ್ಕಾರ ಐಟಿ, ಸಿಬಿಐ, ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ. ನೋಟು ಅಮಾನ್ಯೀಕರಣದಲ್ಲಿ ರಿಸರ್ವ್‍ಬ್ಯಾಂಕ್ ಆಫ್ ಇಂಡಿಯಾ, ಗುಜರಾತ್ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವನ್ನೇ ದುರುಪಯೋಗ ಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಏಕವ್ಯಕ್ತಿ ಆಡಳಿತ ನಡೆಸುತ್ತಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಲವು ಸಚಿವರು ಹಾಗೂ ಶಾಸಕರ ದೂರವಾಣಿ ಕದ್ದಾಲಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೇವಲ ಕರ್ನಾಟಕವಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲೂ ತಮಗೆ ಆಗದವರ ದೂರವಾಣಿಯನ್ನು ಕದ್ದಾಲಿಕೆ ಮಾಡುತ್ತಿದೆ. ಹಿಂದೆ ಯುಪಿಎ ಅಧಿಕಾರಾವಧಿಯಲ್ಲಿ ಇಂತಹ ನಿದರ್ಶನಗಳು ನಡೆದಿರಲಿಲ್ಲ ಎಂದು ಹೇಳಿದರು.

ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೇಲೆ ಕೇಳಿ ಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿಯವರು ಚುನಾವಣೆ ಬಂದಾಗ ಪ್ರಚಾರಕ್ಕಾಗಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಕೇರಳ ಹೈಕೋರ್ಟ್‍ನಲ್ಲಿ ಸರಿತನಾಯರ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಇದೆಲ್ಲಾ ರಾಜಕೀಯ ಗಿಮಿಕ್ ಎಂದು ಮಾರ್ಮಿಕವಾಗಿ ನುಡಿದರು.

Facebook Comments

Sri Raghav

Admin