ನನ್ನ ಹೇಳಿಕೆಗಳು ಪ್ರಚಾರದ ಗಿಮಿಕ್ ಅಲ್ಲ : ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash--

ಬೆಂಗಳೂರು, ನ.12- ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಯಾರ ಮುಖವಾಣಿಯೂ ಅಲ್ಲ. ದೇಶದ ನಾಗರಿಕನಾಗಿ ಪ್ರಶ್ನೆ ಮಾಡುವ ಹಕ್ಕನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ಟೀಕೆಗಳಿಗೆ ಹೆದರುವುದಿಲ್ಲ ಎಂದು ಹಿರಿಯ ನಟ ಪ್ರಕಾಶ್ ರೈ ಸ್ಪಷ್ಟ ಮಾತುಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಪ್ರಬುದ್ಧತೆಯಿಂದ ಮಾತನಾಡಿದ ರೈ, ತಮ್ಮ ನಿಲುವಿಗೆ ಬಲವಾದ ಸಮರ್ಥನೆ ನೀಡಿದರು.

ವೃತ್ತಿಯಲ್ಲಿ ಗುರಿ ತಲುಪಿದ್ದೇನೆ. ಜೀವನಕ್ಕೆ ಸಾಕಾಗುವಷ್ಟು ಹಣವಿದೆ. ಮೂರು ಮನೆ, ಫಾರಂ ಹೌಸ್, ಬಂಡವಾಳ ಹೂಡಿಕೆ ಎಲ್ಲವೂ ಆಗಿದೆ. ಈ ಸಂದರ್ಭದಲ್ಲಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೆ ನೆಮ್ಮದಿಯಾಗಿ ಕಂಪರ್ಟ್ ಝೋನ್‍ನಲ್ಲಿ ಬದುಕಬಹುದು ಎಂಬ ನಿಲುವನ್ನು ನಾನು ವಿರೋಧಿಸುತ್ತೇನೆ ಎಂದರು. ಕಂಪರ್ಟ್ ಝೋನ್‍ನಲ್ಲಿರುವವರು ಮಾತನಾಡದೇ ಇರುವುದು ಬದುಕಿದ್ದೂ ಸತ್ತಂತ್ತೆ. ಕೆಲವರಿಗೆ ಬದುಕಿನ ಅನಿವಾರ್ಯತೆ ಇದೆ. ಅವರು ಮಾತನಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ ಎಂದು ತಿಳಿಸಿದರು.

ರಾಜಕೀಯಕ್ಕೆ ಬರುವುದಿಲ್ಲ:

ನಟ ಎಂಬ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಯಾರಾದರೂ ರಾಜಕೀಯಕ್ಕೆ ಬರುವುದನ್ನು ನಾನು ವಿರೋಧಿಸುತ್ತೇನೆ. ರಾಜಕೀಯಕ್ಕೆ ಬರುವವರು ಏನನ್ನೂ ವಿರೋಧಿಸುತ್ತಾರೋ ಅಂತಹ ನಕಾರಾತ್ಮಕ ಗುಣಗಳು ಖುದ್ದಾಗಿ ಅವರಲ್ಲಿ ಇದೆಯೇ, ಇಲ್ಲವೇ ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಬೇಕು. ಚಿತ್ರರಂಗ ಕ್ಷೇತ್ರ ಬೇರೆ, ರಾಜಕೀಯ ಕ್ಷೇತ್ರ ಬೇರೆ. ರಾಜಕೀಯಕ್ಕೆ ಬರುವ ನಟರು ಸಾಮಾಜಿಕ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ, ಅದಕ್ಕೆ ಪರಿಹಾರ ಸೂಚಿಸುವಂತೆ ಅವರ ಬಳಿ ಇರುವ ಪ್ರಣಾಳಿಕೆ ಏನನ್ನು ಹೇಳುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ನಾನು ಕಮಲ್‍ಹಾಸನ್ ಅವರನ್ನಾಗಲಿ, ಬೇರೆ ಯಾರನ್ನಾಗಲಿ ರಾಜಕೀಯ ಪಕ್ಷ ಕಟ್ಟಿದಾಗ ಬೆಂಬಲಿಸುವುದಿಲ್ಲ. ನಾನೂ ರಾಜಕೀಯ ಪಕ್ಷ ಕಟ್ಟುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನಾನು ವ್ಯಕ್ತಪಡಿಸುವ ಅಭಿಪ್ರಾಯಗಳ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡುತ್ತಾರೆ. ಪ್ರಶ್ನೆಗಳನ್ನು ಕೇಳುವ ಬದಲು ವೈಯಕ್ತಿಕ ದಾಳಿಗಿಳಿಯುತ್ತಾರೆ. ನನ್ನ ಹೆಂಡತಿಯ ಬಗ್ಗೆ ಟೀಕೆ ಮಾಡಿ, ನನ್ನ ವೈಯಕ್ತಿಕ ಜೀವನವನ್ನು ಟೀಕಿಸಿ ಏನನ್ನೋ ಸಾಧಿಸಿದಂತೆ ಬೀಗುತ್ತಾರೆ. ಸೊಂಟದ ಕೆಳಗಿನ ಭಾಷೆ ಬಳಸುವ ಮೂಲಕ ಅವರ ಸುಸಂಸ್ಕøತಿ ಏನು ಎಂಬುದನ್ನು ತೋರಿಸಿಕೊಳ್ಳುತ್ತಾರೆ. ಅಂತಹವರನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡುವುದಿಲ್ಲ. ನನ್ನನ್ನು ಬೆಂಬಲಿಸಿರುವವರು ಇರುವಂತೆ ತೆಗಳುವವರು ಇರಲಿ ಎಂಬುದು ನನ್ನ ನಿಲುವು. ತೆಗಳುವವರು ವೈಯಕ್ತಿಕವಾಗಿ ಟೀಕೆ ಮಾಡಿದಾಗ ಅವರ ಬಗ್ಗೆ ಅಯ್ಯೋ ಪಾಪ ಎಂಬ ಮರುಕದಿಂದಲೇ ಟೀಕೆಯನ್ನು ನೋಡುತ್ತೇನೆ ಎಂದು ತಿಳಿಸಿದರು.

ಜಿಎಸ್‍ಟಿಗೆ ಮೋದಿ ಮಾತ್ರ ಹೊಣೆಯಲ್ಲ:

ಜಿಎಸ್‍ಟಿ ಬಗ್ಗೆ ತಮಿಳಿನ ವಿಜಯ್ ಚಿತ್ರದಲ್ಲಿ ತಪ್ಪು ಮಾಹಿತಿ ಇದೆ ಎಂಬ ಟೀಕೆ ಕೇಳಿ ಬಂತು. ಮಾಹಿತಿ ತಪ್ಪಾಗಿದ್ದರೆ ಅದನ್ನು ಬಿಜೆಪಿಯಾಗಲಿ ಯಾರೇ ಆಗಲಿ ಪ್ರಶ್ನಿಸಬಹುದು. ಅದನ್ನು ಬಿಟ್ಟು ಜಾತಿ ವಿಷಯವನ್ನು ಮುಂದಿಟ್ಟುಕೊಂಡು ಜಗಳ ಮಾಡಿದ್ದು ಸರಿಯಲ್ಲ ಎಂದರು. ಎಲ್ಲಾ ರಾಜಕೀಯ ಪಕ್ಷಗಳು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚೆ ಮಾಡಿ ಒಪ್ಪಿಕೊಂಡ ನಂತರವೇ ಜಾರಿಯಾಗಿದೆ. ಜಿಎಸ್‍ಟಿ ವಿಷಯದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ. ಗೃಹೋಪಯೋಗಿ ಮತ್ತು ಕರಕುಶಲ ವಸ್ತುಗಳಿಗೆ ಜಿಎಸ್‍ಟಿಯಿಂದ ವಿನಾಯ್ತಿ ನೀಡಲೇಬೇಕು. ಕಾಡಿನಲ್ಲಿರುವ ಕಾಡುಕುರುಬ, ಅರಣ್ಯದ ಮಧ್ಯೆ ಹೋಗಿ ಕಷ್ಟಪಟ್ಟು ತಂದ ಜೇನಿಗೆ ಜಿಎಸ್‍ಟಿ ಹಾಕುವುದು, ಲಕ್ಷಾಂತರ ರೂ. ಸಂಪಾದಿಸುವ ನನ್ನಂಥವರಿಗೂ ಅದೇ ಜಿಎಸ್‍ಟಿ ಹಾಕುವುದು ಸರಿಯಲ್ಲ. ಹೀಗಾಗಿ ಕರಕುಶಲ ವಸ್ತುಳಿಗೆ ಜಿಎಸ್‍ಟಿ ವಿನಾಯ್ತಿ ಇರಬೇಕು. ಕುಂಬಾರಿಕೆ, ನೇಯ್ಗೆ, ಜೇನು ಉತ್ಪಾದನೆಯಂತಹ ಕಸುಬುಗಳಿಗೆ ಯಾವ ಪ್ರಮಾಣದ ತೆರಿಗೆಯೂ ಇರಬಾರದು. ಏಕೆಂದರೆ ಅವು ವೃತ್ತಿಗಳಲ್ಲ. ಬದುಕಿನ ದಾರಿಗಳು. ಅಂತಹ ಉತ್ಪನ್ನಗಳಲ್ಲಿ ಭಾವನಾತ್ಮಕ ಅಂಶಗಳಿವೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ನಾನು ಯಾವುದೇ ಸಂದರ್ಭದಲ್ಲೂ ಚಿತ್ರರಂಗದಿಂದ ದೂರವಾಗಲು ಬಯಸುವುದಿಲ್ಲ. ಮತ್ತು ಏನನ್ನೋ ಸಾಧಿಸುತ್ತೇನೆ ಎಂಬ ಭ್ರಮೆಯೂ ಇಲ್ಲ. ಬದುಕು ನೀಡಿದ ಅವಕಾಶಗಳು ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ. ಈಗ ನಾನು ನನ್ನನ್ನು ಹುಡುಕುವ ಪ್ರಯತ್ನ ಆರಭಿಸಿದ್ದೇನೆ. ಇದು ಸರಿಯೋ ತಪೆÇ್ಪೀ ಗೊತ್ತಿಲ್ಲ. ಆದರೆ, ನನ್ನ ನಿಲುವಿನಲ್ಲಿ ಪ್ರಾಮಾಣಿಕತೆ ಇದೆ. ಪ್ರಾಮಾಣಿಕತೆ ಇರುವಾಗ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ನನ್ನ ಗುರುಗಳಾದ ಲಂಕೇಶ್ ಅವರು ಕಲಿಸಿಕೊಟ್ಟಿದ್ದಾರೆ. ಅದನ್ನು ಅಳವಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ಪ್ರಚಾರದ ಹುಚ್ಚಿಗಾಗಿಯೂ ನಾನು ಮಾತನಾಡುತ್ತಿಲ್ಲ. ನನ್ನ ಹೇಳಿಕೆಗಳಿಂದ ನನ್ನನ್ನು ಬ್ರಾಂಡ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾರದ್ದೋ ನೋವಿಗೆ ಧ್ವನಿಯಾಗಿದ್ದೇನೆ ಎಂದರೆ ಅದನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಹಾಗೆಂದ ಮಾತ್ರಕ್ಕೆ ನಾನು ಯಾವುದೇ ಪಂಥ, ವರ್ಗ ಪಕ್ಷಕ್ಕೆ ಸೇರಿದವನಲ್ಲ. ನನಗೆ ಯಾವ ಅಝೆಂಡವೂ ಇಲ್ಲ. ಝಂಡವೂ ಇಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳದೆ ಟೀಕೆ ಮಾಡಿದರೆ ಅದಕ್ಕೆ ಪ್ರತಿ ಬಾರಿಯೂ ಉತ್ತರ ನೀಡುತ್ತಾ ಕೂರುವುದಿಲ್ಲ ಎಂದರು. ಕಾವೇರಿ ವಿವಾದ ಗಲಾಟೆ ವೇಳೆ ಚಾನಲ್‍ವೊಂದರ ಸಂವಾದ ನಾನು ಎದ್ದು ಹೋಗಿದ್ದನ್ನು ಟೀಕಿಸಲಾಯಿತು. ಪ್ರಶ್ನೆ ಕೇಳುವವರ ಬಳಿಯೇ ಉತ್ತರ ಇದ್ದು, ನಾನು ಉದ್ವಿಗ್ನ ಹೇಳಿಕೆ ನೀಡಬೇಕು ಎಂದು ಬಯಸುವವರಿಗೆ ಆಹಾರ ವಾಗಲಾರೆ, ಕಾವೇರಿ ವಿವಾದಕ್ಕೆ ಒಬ್ಬ ನಟನಾಗಿ ಹೇಳಿಕೆ ನೀಡಿದಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಅದು ರೈತರ ಸ್ವಾಭಿಮಾನದ ಪ್ರಶ್ನೆ. ಎರಡು ರಾಜ್ಯಗಳಲ್ಲಿ ಪರಸ್ಪರ ಸಂಘರ್ಷ ಹುಟ್ಟಿಹಾಕಿದರೆ ಸೌಹಾರ್ದತೆ ಹದಗೆಡುತ್ತದೆಯೇ ಹೊರತು ಸಮಸ್ಯೆ ಜೀವಂತವಾಗಿ ಉಳಿಯುತ್ತದೆ. ಕಾವೇರಿ ಭಾಗದಲ್ಲಿರುವ ಕಾಡನ್ನು ಕಾಪಾಡಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಕಾವೇರಿ ನೀರೇ ಇಲ್ಲದಂತಾಗುತ್ತದೆ. ಈ ಸಂದರ್ಭದಲ್ಲಿ ರೈತರ ಭೂಮಿಯಲ್ಲಿ ಬರಿದಾಗುತ್ತಿರುವ ಅಂತರ್ಜಲದ ಬಗ್ಗೆಯೂ ಚರ್ಚೆಯಾಗಬೇಕು. ಕೃಷಿಗೆ ಸರಿಯಾದ ಬೆಲೆ ಸಿಗದೇ ಇರುವುದರ ಬಗ್ಗೆಯೂ ವಿಶ್ಲೇಷಣೆ ನಡೆಯಬೇಕು. ಕಾವೇರಿಯನ್ನು ಭಾವನಾತ್ಮಕ ವಿಷಯ ಮಾಡಿ ಗೊಂದಲ ಮೂಡಿಸುವುದನ್ನು ನಾನು ಒಪ್ಪುವುದಿಲ್ಲ ಎಂದರು.

ನನ್ನ ಇತ್ತೀಚಿನ ಹೇಳಿಕೆಯಿಂದ ಕೆಲವು ಕಂಪೆನಿಗಳು ಹೆದರಿ ವಾಣಿಜ್ಯ ಜಾಹೀರಾತುಗಳಿಂದ ನನ್ನನ್ನು ದೂರವಿಟ್ಟಿವೆ. ಅದಕ್ಕೆ ಕೆಲವರು ಪರೋಕ್ಷವಾಗಿ ಒತ್ತಡ ಹೇರಿದ್ದಾರೆ. ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ನಿಲುವುಗಳನ್ನು ವ್ಯಕ್ತಪಡಿಸುವ ಧೋರಣೆಯನ್ನು ಮುಂದುವರೆಸುತ್ತೇನೆ ಎಂದರು.

Facebook Comments

Sri Raghav

Admin