ನಾಳೆಯಿಂದ ಕುಂದಾನಗರಿಯಲ್ಲಿ ಅಧಿವೇಶನ, ಬಾಂಬ್ ಹಾಕಲಿದ್ದಾರಂತೆ ಯಡಿಯೂರಪ್ಪ..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-Siddaramaiah

ಮಂಗಳೂರು, ನ.12- ನಾಳೆಯಿಂದ ಕುಂದಾನಗರಿ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಹಿರಂಗ ಪಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಕುರಿತು ಮಾತನಾಡಲು ಒಂದೇ ವೇದಿಕೆಗೆ ಬರಬೇಕೆಂದು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಬಿಎಸ್‍ವೈ ಇಂದು ಈ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎಂದು ಸಿದ್ದರಾಮಯ್ಯನವರು ಅಬ್ಬರಿಸುತ್ತಿದ್ದಾರೆ. ಇವರೇನು ಸತ್ಯಹರಿಶ್ಚಂದ್ರ ವಂಶದಲ್ಲಿ ಹುಟ್ಟಿಬಂದವರಲ್ಲ. ನಿಮ್ಮ ಅವಧಿಯಲ್ಲಿ ಏನೇನು ನಡೆದಿದೆ ಎಂಬುದನ್ನು ಸದನದಲ್ಲೇ ದಾಖಲೆ ಸಮೇತ ಬಿಚ್ಚಡಲಿದ್ದೇವೆ ಎಂದು ಗುಡುಗಿದ್ದಾರೆ.
ಆದರೆ, ಯಾವ ಹಗರಣದ ದಾಖಲೆ ಎಂಬುದನ್ನು ಮಾತ್ರ ಯಡಿಯೂರಪ್ಪ ಬಹಿರಂಗ ಪಡಿಸಲಿಲ್ಲ. ನಾಳೆವರೆಗೂ ಕಾದು ನೋಡಿ, ಸದನದಲ್ಲಿ ಎಲ್ಲವೂ ಬಹಿರಂಗಗೊಳ್ಳಲಿವೆ ಎಂದು ಸೂಚ್ಯವಾಗಿ ಹೇಳಿದರು.

ಕಳೆದ ನಾಲ್ಕೂವರೆ ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದಿಲ್ಲೊಂದು ಭ್ರಷ್ಟಾಚಾರವನ್ನು ನಡೆಸುತ್ತಲೇ ಬಂದಿದೆ. ನಾವು ಏನೂ ಮಾಡಿಲ್ಲ ಎಂದು ಪ್ರತಿಯೊಂದಕ್ಕೂ ವಿರೋಧ ಪಕ್ಷದವರನ್ನೇ ಟೀಕೆ ಮಾಡುತ್ತಾರೆ. ಹಿಂದೆ ಕೆಲವು ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿದರೂ ಇನ್ನೂ ಏನೂ ಮಾಡಿಲ್ಲ ಎಂದು ಹೇಳುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದರು.

ಸಿಬಿಐ ತನಿಖೆಗೆ ವಹಿಸಿ:

ನಿಮ್ಮ ಸರ್ಕಾರ ಭಾರೀ ಪ್ರಾಮಾಣಿಕವಾಗಿದೆ ಎಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುತ್ತಿದ್ದೀರಿ. ಅಷ್ಟೊಂದು ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದರೆ ಹಗರಣಗಳನ್ನು ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದರು. ಸಿಬಿಐನಿಂದ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯ. ಸಿಐಡಿ, ಎಸ್‍ಐಟಿ, ಎಸಿಬಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ಸರ್ಕಾರದ ಮೂಗಿನಡಿಯೇ ಇರುವುದರಿಂದ ನಮಗೆ ಅದರಲ್ಲಿ ವಿಶ್ವಾಸವಿಲ್ಲ ಎಂದರು.

ವಾಸಪ್ ಕರೆಸಿಕೊಳ್ಳಿ:

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೇಲೆ ಅತ್ಯಾಚಾರದ ಆರೋಪ ಸಾಬೀತಾಗಿದೆ. ಇಂತಹ ಮನುಷ್ಯನಿಂದ ಕಾಂಗ್ರೆಸ್ ಅದ್ಯಾವ ರೀತಿ ಪಕ್ಷ ಸಂಘಟಿಸುತ್ತದೆಯೋ ಗೊತ್ತಿಲ್ಲ. ಆದರೆ, ಈ ಪ್ರಕರಣದಿಂದ ರಾಜ್ಯದ ಜನತೆ ಭಯಬೀತರಾಗಿದ್ದಾರೆ. ವೇಣುಗೋಪಾಲ್ ಎಲ್ಲೆಲ್ಲಿ ಬರುತ್ತಾರೋ ಅಲ್ಲಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್ ಹೈಕಮಾಂಡ್‍ಗೆ ಸ್ವಲ್ಪವಾದರೂ ಮಾನ, ಮರ್ಯಾದೆ, ಆತ್ಮಗೌರವವಿದ್ದರೆ ಅವರನ್ನು ಉಸ್ತುವಾರಿಯಿಂದ ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದರು.

ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರೇ ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಕೆಲ ಸಚಿವರ ಕೃಪಾಪೋಷದಿಂದಾಗಿ ಮರಳು ಕೃತಕ ಅಭಾವ ಸೃಷ್ಟಿಯಾಗಿದೆ. ಇದರಿಂದ ಮಧ್ಯಮ ವರ್ಗದವರು, ಬಡವರು, ಜನಸಾಮಾನ್ಯರು ಮನೆ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾಂಗ್ರೆಸೇ ಕಾರಣ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಸಮಾಜಘಾತಕ ಶಕ್ತಿಗಳ ಹಾವಳಿ, ಡ್ರಗ್ಸ್ ಮಾಫಿಯ ಮಿತಿ ಮೀರಿದೆ. ತಡೆಗಟ್ಟಬೇಕಾದ ಸರ್ಕಾರವೇ ಕೈ ಕಟ್ಟಿ ಕುಳಿತಿದೆ. ಈ ಹಗರಣದಲ್ಲಿ ಸರ್ಕಾರದ ಕೆಲವು ಪ್ರಭಾವಿ ಸಚಿವರು ಶಾಮೀಲಾಗಿದ್ದಾರೆ ಎಂದು ದೂರಿದರು.

ಎನ್‍ಐಎ ಸ್ಥಾಪನೆ:

ಕರಾವಳಿ ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದೆ. ಇಲ್ಲಿ ಕೇರಳ ಮಾದರಿಯ ಹತ್ಯೆ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇವೆ. ಐಸೀಸ್ ಸಂಘಟನೆಗೆ ಸೇರಲು ಕೆಲವು ಯುವಕರನ್ನು ನಿರ್ದಿಷ್ಟ ಕೋಮಿನ ಸಂಘಟನೆಗಳು ಪ್ರೇರೆಪಿಸುತ್ತಿವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಪ್ರಾರಂಭಿಸುವುದಾಗಿ ಹೇಳಿದರು. ಎಸ್‍ಟಿಪಿಐ, ಪಿಎಫ್‍ಐನಂತಹ ಸಂಘಟನೆಗಳಿಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಈ ಸಂಘಟನೆಗಳನ್ನು ನಿಷೇಧಿಸುವಂತೆ ಮತ್ತಷ್ಟು ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ನಳೀನ್‍ಕುಮಾರ್ ಕಟೀಲ್, ಶೋಭಾಕರಂದ್ಲಾಜೆ, ಮಾಜಿ ಸಚಿವ ನಾಗರಾಜಶೆಟ್ಟಿ, ಮಾಜಿ ಶಾಸಕರಾದ ಯೋಗೇಶ್‍ಭಟ್, ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮತ್ತಿತರರು ಇದ್ದರು.

Facebook Comments

Sri Raghav

Admin